ಗದಗ: ಬೇಸಿಗೆ ಪೂರ್ವದಲ್ಲಿಯೇ ಜಿಲ್ಲೆಯು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ಗುರುವಾರ ನಡೆದ ವಿಶೇಷ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅದೇ ರೀತಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಕಳೆದ 10 ದಿನಗಳಿಂದ ನಿರಂತರವಾಗಿ ಕನ್ನಡಪ್ರಭ ಪ್ರಕಟಿಸಿದ ವರದಿಗಳಿಗೆ ಹಲವಾರು ಓದುಗರು ಪ್ರತಿಕ್ರಿಯಿಸಿದ್ದು, ಜೀವಜಲದ ಸಮಸ್ಯೆ ನೀಗಲು ಶೀಘ್ರ ಪರಿಹಾರೋಪಾಯಗಳನ್ನು ಕಂಡುಹಿಡಿಯಬೇಕೆಂದು ಹಕ್ಕೊತ್ತಾಯ ಮಾಡಿದ್ದಾರೆ. ಕ್ರಮ ಕೈಗೊಳ್ಳಬೇಕು: ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಳಿತು ಸಭೆ ನಡೆಸಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಸ್ಥಳಕ್ಕೆ ತೆರಳಿ ಕೂಡಲೇ ಪರಿಶೀಲನೆ ನಡೆಸಿ, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಸಾರ್ವಜನಿಕರಿಗೆ ಅಗತ್ಯ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಆ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.ಗಮನ ಹರಿಸಬೇಕು: ಗದಗ- ಬೆಟಗೇರಿ ಅವಳಿ ನಗರದಲ್ಲಿ ಮಳೆ ಮತ್ತು ಚಳಿಗಾಲದಲ್ಲಿಯೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ತುಂಗಭದ್ರಾ ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರಿದ್ದರೂ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ನಗರಸಭೆಯ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ನಗರಸಭೆ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿ ಕೂಡಲೇ ಈ ಕುರಿತು ಗಮನ ಹರಿಸಬೇಕು ಎಂದು ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ ತಿಳಿಸಿದರು.ಆತಂಕ ಪಡುವ ಅಗತ್ಯವಿಲ್ಲ: ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಈಗಾಗಲೇ ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ನಿರಂತರವಾಗಿ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದ್ದು, ಬೇಸಿಗೆಯಲ್ಲಿ ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ಜರುಗಿಸಲಾಗಿದೆ. ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ತಿಳಿಸಿದರು.
ಜಿಲ್ಲಾಧಿಕಾರಿ ಕೇವಲ ನೀರಿನ ಸಮಸ್ಯೆ ಬಗೆಹರಿಸುತ್ತೇವೆ, ಸೂಚನೆ ನೀಡಲಾಗಿದೆ ಎಂದು ಹೇಳುತ್ತಾ ಕುಳಿತರೆ ಸಾಲದು. ಅದರಲ್ಲಿಯೂ ಗದಗ- ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ತೊಂದರೆ ಇದ್ದು, ಇದನ್ನು ಸಾಧ್ಯವಾದಷ್ಟು ಬೇಗನೇ ಸರಿಪಡಿಸಬೇಕು. ಜಿಲ್ಲಾಧಿಕಾರಿ, ನಗರಸಭೆಯ ಸದಸ್ಯರು ಕೂಡಲೇ ಗಮನ ನೀಡಬೇಕು ಎಂದು ಸಾರ್ವಜನಿಕರಾದ ಅರವಿಂದ ಹುಲ್ಲೂರು ತಿಳಿಸಿದರು. ಪ್ರಯೋಜನವಾಗಿಲ್ಲ: ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಅದರಲ್ಲಿಯೂ ಕೆಲವೊಂದು ಬಡಾವಣೆಗಳಲ್ಲಿ ಇಂದಿಗೂ ಕ್ಷಾರಯುಕ್ತ ಸವುಳು ನೀರನ್ನೇ(ಕೊಳವೆಬಾವಿ) ಅವಲಂಬಿಸಲಾಗಿದೆ. ಈ ಬಗ್ಗೆ ಈಗಾಗಲೇ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯ ತೀವ್ರತೆ ತಿಳಿಸಲಾಗುವುದು ಎಂದು ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ಧಣ್ಣ ಪಲ್ಲೇದ ತಿಳಿಸಿದರು.ಕಿಂಚಿತ್ತೂ ಗಮನ ನೀಡಿಲ್ಲ: ಹಲವಾರು ದಶಕಗಳಿಂದಲೇ ಅವಳಿ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಿಂಚಿತ್ತೂ ಗಮನ ನೀಡಿಲ್ಲ. ಸಚಿವರ ನಿರ್ಲಕ್ಷ್ಯವನ್ನೇ ಅಧಿಕಾರಿಗಳು ಬಂಡವಾಳವನ್ನಾಗಿ ಮಾಡಿಕೊಂಡಿದ್ದು, ಸಾರ್ವಜನಿಕರ ನೀರಿನ ಸಮಸ್ಯೆಗಳಿಗೆ ನಗರಸಭೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ತಿಳಿಸಿದರು.