ತೆರಿಗೆ ವಂಚನೆ: ನಗರಸಭೆ ಅಧಿಕಾರಿಗಳಿಂದ ದಾಳಿ

KannadaprabhaNewsNetwork | Published : Aug 25, 2024 1:51 AM

ಸಾರಾಂಶ

ಉದ್ದಿಮೆದಾರರು, ಹೊಟೇಲ್‌ ಮಾಲಿಕರ ಬೇಜವಾಬ್ದಾರಿ । ಶೇ.85ರಷ್ಟು ವರ್ತಕರಿಂದ ತೆರಿಗೆ ವಂಚನೆ । ಅಂಗಡಿ ಮುಂಗಟ್ಟುಗಳಿಗೆ ಬೀಗ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಪ್ರತಿ ವರ್ಷ ನಗರಸಭೆಗೆ ಕಟ್ಟಬೇಕಾದ ತೆರಿಗೆ ವಂಚನೆ ಹಾಗೂ ಪರವಾನಗಿ ನವೀಕರಣದ ವಿಚಾರದಲ್ಲಿ ಸಣ್ಣ-ಪುಟ್ಟ ಹಾಗೂ ಮಧ್ಯಮ ವ್ಯಾಪಾರಸ್ಥರು, ವರ್ತಕರಿಗಿಂತ ಹೆಚ್ಚಾಗಿ ದೊಡ್ಡವರಿಂದಲೆಯೇ ಹೆಚ್ಚಾಗಿ ವಂಚನೆ ನಡೆದಿದ್ದು, ಇತ್ತೀಚೆಗೆ ನಗರಸಭೆ ಅಧಿಕಾರಿಗಳು ನಡೆಸಿದ ದಾಳಿ ಬೆನ್ನಲ್ಲಿಯೇ ವಂಚಕರು ಬಾಕಿ ತೆರಿಗೆ ಪಾವತಿ, ನವೀಕರಣಕ್ಕೆ ಮುಂದಾಗುತ್ತಿದ್ದಾರೆ.

ಹಲವಾರು ವರ್ಷಗಳಿಂದ ನಗರಸಭೆಗೆ ತೆರಿಗೆ ಹಣ ಪಾವತಿಸದೆ, ನಿಯಮಾನುಸಾರ ಕಾಲಕಾಲಕ್ಕೆ ವ್ಯಾಪಾರ-ವಹಿವಾಟಿನ ಪರವಾನಗಿಯನ್ನು ನವೀಕರಣ ಮಾಡದೆ ವರ್ತಕರು ನುಣಿಚಿಕೊಳ್ಳುತ್ತಿದ್ದರು. ಶೇ.85 ರಷ್ಟು ವರ್ತಕರು ತೆರಿಗೆ ವಂಚನೆ ಮಾಡುತ್ತಿದ್ದರು. ಅಷ್ಟೇ ಪ್ರಮಾಣದಲ್ಲಿ ವರ್ತಕರು ಯಾವುದೇ ರೀತಿಯ ಪರವಾನಗಿ ಪಡೆಯದೇ, ನವೀಕರಣ ಮಾಡದೇ ವ್ಯಾಪಾರ-ವಹಿವಾಟಿನಲ್ಲಿ ತೊಡಗಿದ್ದರು. ಪ್ರತಿ ವರ್ಷ ನಗರಸಭೆಗೆ ಬರಬೇಕಾಗಿದ್ದ ಸುಮಾರು 4 ಕೋಟಿ ವಾಣಿಜ್ಯ ತೆರಿಗೆಯಲ್ಲಿ ಕೇವಲ 35 ಲಕ್ಷ ರು. ಮಾತ್ರ ಸಂಗ್ರಹವಾಗುತ್ತಿತ್ತು. ಇದರಿಂದಾಗಿ ನಗರಸಭೆ ಖಜಾನೆ ಭರ್ತಿಯಾಗಲು ತೀವ್ರ ಸಮಸ್ಯೆಯಾಗಿತ್ತು. ಇದನ್ನರಿತ ಅಧಿಕಾರಿಗಳು ವಿವಿಧೆಡೆ ದಾಳಿ ಮಾಡಿ ತೆರಿಗೆ ಕಟ್ಟದ ಹಾಗೂ ಪರವಾನಗಿ ಪಡೆಯದ, ನವೀಕರಿಸದ ಅಂಗಡಿ, ಮುಂಗಟ್ಟು, ಹೋಟೆಲ್, ಮಳಿಗೆಗಳ ಮೇಲೆ ದಾಳಿ ಮಾಡಿ ಬೀಗ ಜಡಿದು, ಸೀಲ್‌ ಹಾಕಿ, ನಳದ ಸಂಪರ್ಕ ಕಡಿತಗೊಳಿಸಿ ಶಾಕ್‌ ಕೊಡುತ್ತಿದ್ದಂತೆ ಎಚ್ಚೆತ್ತ ವರ್ತಕರು ಬಾಕಿ ತೆರಿಗೆ ಪಾವತಿ, ಪರವಾನಗಿ ನವೀಕರಣಕ್ಕೆ ಮುಂದಾಗಿದ್ದಾರೆ.

ದೊಡ್ಡವರ ಬೇಜವಾಬ್ದಾರಿ: ಸಣ್ಣ-ಪುಟ್ಟ ವ್ಯಾಪಾರಸ್ಥರ ಜೊತೆಗೆ ದೊಡ್ಡ ದೊಡ್ಡ ಉದ್ದಿಮೆದಾರರು, ಹೊಟೇಲ್‌, ಬಾರ್‌ ಆಂಡ್‌ ರೆಸ್ಟೊರೆಂಟ್‌ ಮಾಲೀಕರೆ ತೆರಿಗೆ ಪಾವತಿ, ಪರವಾನಗಿ ನವೀಕರಣದ ವಿಚಾರದಲ್ಲಿ ಬೇಜವಾಬ್ದಾರಿ ತೋರಿರುವುದು ಬೆಳಕಿಗೆ ಬಂದಿದೆ. ನಿತ್ಯ ಲಕ್ಷಾಂತ ರು. ವ್ಯಾಪಾರ-ವಹಿವಾಟು ಮಾಡುವವರೇ ನಗರಸಭೆಗೆ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದು, ಇಷ್ಟೇ ಅಲ್ಲದೇ ಅನೇಕರು ಪರವಾನಗಿ ಇಲ್ಲದೆಯೇ ವ್ಯಾಪಾರ ನಡೆಸುತ್ತಿದ್ದಾರೆ. ಇನ್ನು ಕೆಲವರು ಹೋಟೆಲ್‌ ಪರವಾನಗಿ ಪಡೆದು ಬಾರ್‌ ಮತ್ತು ರೆಸ್ಟೊರೆಂಟ್‌ಗಳನ್ನು ನಡೆಸುತ್ತಿದ್ದು, ಇನ್ನು ಕೆಲವರು ಕೆಳಗಿನ ನೆಲಮಳಿಗೆಗೆ ಮಾತ್ರ ಪರವಾನಗಿ ಪಡೆದು ಮೇಲಿನ ಮಳಿಗೆಯಲ್ಲಿಯೂ ವ್ಯಾಪಾರ ಮಾಡುತ್ತಿರುವ ವಿಷಯಗಳು ದಾಳಿಯಲ್ಲಿ ಬಯಲುಗೊಂಡಿವೆ.

ವರ್ಕೌಟ್‌ ಆಗದ ಒತ್ತಡ ತಂತ್ರ: ಯಾವುದೇ ಸಮಯದಲ್ಲಿ ನಗರಸಭೆಯು ಕಠಿಣ ಚರ್ಚೆಗಳಿಗೆ ಮುಂದಾದ ವೇಳೆ ಸಚಿವರು, ಸಂಸದರು, ಶಾಸಕರು ಸೇರಿ ಇತರೆ ಪ್ರಭಾವಿ ನಾಯಕರ ಮುಖಾಂತರ ಆಡಳಿತ ವರ್ಗದ ಮೇಲೆ ಒತ್ತಡ ಹೇರುತ್ತಿದ್ದರು. ಅದೇ ರೀತಿ ಈ ಬಾರಿಯೂ ನಗರಸಭೆ ಮೇಲೆ ಒತ್ತಡ ತಂತ್ರವನ್ನು ಪ್ರಯೋಗಿಸಿದ್ದರು ಅದು ಫಲ ನೀಡದ ಕಾರಣಕ್ಕೆ ಅನಿವಾರ್ಯವಾಗಿ ತೆರಿಗೆ ಪಾವತಿಗೆ ಮುಂದಾಗುವುದರ ಜೊತೆಗೆ ಪರವಾನಗಿ ಪಡೆಯಲು ಹಾಗೂ ನವೀಕರಣಕ್ಕು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಕೇವಲ ಎರಡೆ ದಿನಗಳಲ್ಲಿ ಸುಮಾರು 50 ಲಕ್ಷಕ್ಕು ಹೆಚ್ಚು ಬಾಕಿ ತೆರಿಗೆಯು ಪಾವತಿಯಾಗಿದ್ದು, ಮತ್ತೊಂದು ಕಡೆ 500 ಕ್ಕು ಹೆಚ್ಚು ಪರವಾನಗಿ ಅರ್ಜಿಗಳು ಬಂದಿವೆ.

ನಗರದ ಸಮಗ್ರ ಅಭಿವೃದ್ಧಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಬೇಕಾಗಿದ್ದು ಈ ಹಿನ್ನೆಲೆ ಇರುವಂತಹ ಪರದಿಯಲ್ಲಿಯೇ ಸಂಪನ್ಮೂಲ ಕ್ರೋಢೀಕರಣದ ಅಗತ್ಯವಿದೆ. ಅದಕ್ಕಾಗಿ ತೆರಿಗೆ ಪಾವತಿಸದ ಹಾಗೂ ಪರವಾನಗಿ ನವೀಕರಿಸದವರ ವಿರುದ್ಧ ಕ್ರಮ ಜಾರಿಗೊಳಿಸಲಾಗಿದೆ. ಉಸ್ತುವಾರಿ ಸಚಿವರು, ಡಿಸಿ ಅವರ ಸೂಚನೆ ಮೇರೆಗೆ ನಿಯಮಾನುಸಾರವಾಗಿಯೇ ತೆರಿಗೆ ವಸೂಲಿ ಮಾಡಲಾಗುತ್ತಿದ್ದು, ಪರವಾನಗಿ ನೀಡಲು ಸಹ ಪ್ರತ್ಯೇಕ ಕೌಂಟರ್‌ ಆರಂಭಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ತಿಳಿಸಿದ್ದಾರೆ.

Share this article