ಕನ್ನಡಪ್ರಭ ವಾರ್ತೆ ಮೈಸೂರು
‘ಕನಕಮಾರ್ಗ’ ಚಲನಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ನೀಡಿದ್ದು, ಇದು ಎಲ್ಲೆಡೆ ಪ್ರದರ್ಶನವಾಗಿ, ಕನಕರ ಸಂದೇಶವಾಗಬೇಕು ಪ್ರಸಾರವಾಗಬೇಕು ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.ಜನಪರ ಸಾಹಿತ್ಯ ಪರಿಷತ್ತು, ಡಾ.ಎಂ.ಶಾಂತಾ ರಾಮಕೃಷ್ಣ ಅಭಿಮಾನಿಗಳ ಸಂಘ, ಸ್ವಾಮಿ ಎಂ. ರಾಜೇಶ್ ಅಭಿಮಾನಿಗಳ ಬಳಗವು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕನಕಮಾರ್ಗ ಸಿನಿಮಾ ಪ್ರದರ್ಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆರಿಗೆ ವಿನಾಯ್ತಿ ನೀಡಿದ್ದಾರೆ. ಆದ್ದರಿಂದ ಈ ಚಿತ್ರ ಹೆಚ್ಚು ಹೆಚ್ಚು ಪ್ರದರ್ಶನವಾಗಬೇಕು ಎಂದರು.
ಡಾ.ಎಚ್.ಜೆ. ಲಕ್ಕಪ್ಪಗೌಡ, ಡಾ.ಬಿ.ಕೆ. ರವಿ, ಕಾ.ತ. ಚಿಕ್ಕಣ್ಣ ಅವರ ಸಹಕಾರದಿಂದ ಕನಕ ಸಾಹಿತ್ಯ ಕುರಿತು 15 ಸಂಪುಟಗಳನ್ನು ಹೊರತರಲಾಗಿದೆ. ಕನಕರ ಸಂದೇಶವನ್ನು 14 ಭಾಷೆಗಳಿಗೆ ಅನುವಾದಿಸಲಾಗಿದೆ. ಬಹುಮುಖ ವ್ಯಕ್ತಿತ್ವದ ಕನಕದಾಸರ ಸಾಹಿತ್ಯ ಜನಮನವನ್ನು ತಲುಪಬೇಕಾಗಿದೆ ಎಂದರು.ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್. ದತ್ತೇಶ್ಕುಮಾರ್ ಅಭಿನಂದನಾ ಭಾಷಣ ಮಾಡಿ, ಕನಕದಾಸರು ಹಾಗೂ ಪುರಂದರ ದಾಸರು ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದೆ ಹೆಸರಾಗಿದ್ದಾರೆ. ಪ್ರಸ್ತುತ ಸ್ವಾರ್ಥದ ಸಮಾಜದಲ್ಲಿ ಜನಪರ ಕಾಳಜಿವುಳ್ಳ ಕನಕರ ಚಿಂತನೆ ಪ್ರಚಾರವಾಗಬೇಕಾಗಿದೆ ಎಂದರು.
ಯುವಕರು ಮೊಬೈಲ್, ಟಿವಿ, ಬೈಕು, ಕಾರು ಎಂದುಕೊಂಡು ತಂದೆ- ತಾಯಿಯನ್ನು ಮರೆತಿದ್ದಾರೆ. ಪ್ರತಿಭಾವಂತರು ದೇಶದ ಅನ್ನದ ಋಣ ತೀರಿಸುವ ಬದಲು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಕನಕಮಾರ್ಗ ಚಿತ್ರವನ್ನು ಶಿಕ್ಷಣ ಇಲಾಖೆಯ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರದರ್ಶಿಸುವ ಕೆಲಸ ಆಗಬೇಕು ಎಂದರು.ಮುಖ್ಯಅತಿಥಿಯಾಗಿದ್ದ ವಿಧಾನ ಪರಿಷತ್ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ಸಂತಶ್ರೇಷ್ಠರಾದ ಕನಕದಾಸರು ವಿಶ್ವಗುರುವಾಗಿದ್ದರು. ಭಕ್ತಿಮಾರ್ಗದಲ್ಲಿ ಬದುಕು ನಡೆಸುವುದನ್ನು ತೋರಿಸಿದರು. ಕೀರ್ತನೆಗಳು ಮಾತ್ರವಲ್ಲದೇ ಸಾಹಿತ್ಯವನ್ನು ರಚಿಸಿ, ಅಹಂಕಾರ ಬಿಡಿ, ಕುಲಕುಲವೆಂದು ಹೊಡೆದಾಡದಿರಿ ಎಂದು ಸಾರಿದರು ಎಂದರು.ಆದರೆ ಪ್ರಸ್ತುತ ಜಾತಿ ತಾರತಮ್ಯ ಇದೆ. ಹಲವಾರು ವೈರುಧ್ಯಗಳಿವೆ. ಜ್ಯೋತಿಷ್ಯ ನಂಬಿ ಯಂತ್ರ- ಮಂತ್ರ ಎಂದು ಜನರು ಮೂಢನಂಬಿಕೆಯ ಆಚರಣೆಯಲ್ಲಿದ್ದಾರೆ ಎಂದು ಅವರು ವಿಷಾದಿಸಿದರು.
ಹೀಗಾಗಿ ವಿದ್ಯಾರ್ಥಿಗಳಲ್ಲಿ ಕನಕದಾಸರ ಸಂದೇಶಗಳನ್ನು ಒಡಮೂಡಿಸಬೇಕಾಗಿದೆ. ಆ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕಿದೆ ಎಂದು ಹೇಳಿದರು.ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ. ರವಿ ಮಾತನಾಡಿ, ಎಂಭತ್ತರ ದಶಕದಿಂದ ಈಚೆಗೆ ಕನಕದಾಸರ ಸಂದೇಶಗಳ ಪ್ರಚಾರ ಆರಂಭವಾಯಿತು. ಇದಕ್ಕೆ ಸಿದ್ದರಾಮಯ್ಯ, ಎಚ್.ಎಂ. ರೇವಣ್ಣ, ಎಚ್. ವಿಶ್ವನಾಥ್ ಅವರು ಕಾರಣ. ಕನಕ ಗುರುಪೀಠ ಆರಂಭವಾದ ನಂತರ ದೊಡ್ಡಮಟ್ಟದಲ್ಲಿ ಸಂಘಟನೆಯಾಯಿತು. ಐದು ಜನರಿಂದ ಆರಂಭವಾದ ಕನಕ ಚಳವಳಿ ಈಗ 50 ಲಕ್ಷ ಜನರನ್ನು ತಲುಪಿದೆ ಎಂದರು.
ಕೆ.ಆರ್. ನಗರದ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಕೆ.ಆರ್. ಪ್ರಭಾವತಿ, ಜನಪರ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಡಾ.ಡಿ. ರವಿ, ರಾಜ್ಯ ಮಹಿಳಾ ನಿರ್ದೇಶಕಿ ಎಂ. ಶಾಂತಾ ರಾಮಕೃಷ್ಣ, ಸ್ವಾಮಿ ಎಂ. ರಾಜೇಶ್ ಇದ್ದರು. ಜನಪರ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಂ. ಮಹೇಶ್ ಚಿಕ್ಕಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿದರು. ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ ಸ್ವಾಗತಿಸಿದರು. ಸವಿತಾ ನಿರೂಪಿಸಿದರು. ಪುಟ್ಟರಾಜು ಪ್ರಾರ್ಥಿಸಿದರು.ಕನಕಮಾರ್ಗ ಪ್ರಶಸ್ತಿ ಪುರಸ್ಕೃತರು
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕೊಪ್ಪಳ ವಿವಿ ಕುಲಪತಿ ಡಾ.ಬಿ.ಕೆ. ರವಿ, ಎಂ. ಹೇಮಾವತಿ- ಆಡಳಿತ,ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಚಿಕ್ಕಮಗಳೂರಿನ ಜೆ.ಎಸ್. ರೇಖಾ ಹುಲಿಯಪ್ಪಗೌಡ, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ. ಎಂ. ಮಹೇಂದ್ರ ಕಾಗಿನೆಲೆ, ಆರ್. ಸುಮಿತ್, ಎಸ್.ಎಂ. ಮನೋಹರ್, ಡಿ.ಕೆ. ಗಿರೀಶ್- ಸಂಘಟನೆ, ವಿ. ಅಂಜನಪ್ಪ- ಸಮಾಜಸೇವೆ, ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ. ಮಹದೇವಸ್ವಾಮಿ- ಕಾನೂನು, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ. ಕೆ.ಆರ್. ಆಸ್ಪತ್ರೆ ವೈದ್ಯ ಡಾ. ಪ್ರದೀಪ್- ವೈದ್ಯಕೀಯ, ಮದ್ರಾಸ್ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ. ರಂಗಸ್ವಾಮಿ- ಸಾಹಿತ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಸೋಮೇಗೌಡ. ಎಚ್. ಬ್ರಹ್ಮಲಿಂಗಯ್ಯ- ಶಿಕ್ಷಣ, ಕೊಡಗು ವಿವಿ ಸಿಂಡಿಕೇಟ್ ಸದಸ್ಯೆ ಡಾ.ಕಾವೇರಿ ಪ್ರಕಾಶ್- ಶಿಕ್ಷಣ, ಮೈಸೂರು ಕೋ-ಆಪ್ ಬ್ಯಾಂಕಿನ ಅಧ್ಯಕ್ಷೆ ಪಿ. ರಾಜೇಶ್ವರಿ- ಬ್ಯಾಂಕಿಂಗ್ ವ್ಯವಹಾರ, ಎಸ್. ಲಕ್ಷ್ಮೀ- ಸಮಾಜ ಸೇವೆ ಅವರಿಗೆ ಕನಕಮಾರ್ಗ ಪ್ರಶಸ್ತಿ ಪ್ರದಾನ ಮಾಡಲಾಯಿತು.