ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಬಳ್ಳಾರಿಜಿಎಸ್ಟಿ 2.0 ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯಗತಗೊಳಿಸಲು ಸುಲಭವಾಗುವಂತೆ ರೂಪಿಸಲಾಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ತಿಳಿಸಿದರು.
ಜಿಎಸ್ಟಿ 2.0 ದರ ಬದಲಾವಣೆ ಮತ್ತು ಪರಿವರ್ತನಾ ಸಮಸ್ಯೆಗಳ ಕುರಿತು ನಗರದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಿಎಸ್‌ಟಿ 1.0ರ ಮುಖ್ಯ ಉದ್ದೇಶ ಒಂದು ರಾಷ್ಟ್ರ, ಒಂದು ತೆರಿಗೆ ಎಂಬ ನೀತಿಯನ್ನು ಅಳವಡಿಸಿಕೊಂಡು ತೆರಿಗೆ ಜಾರಿಗೊಳಿಸಿದ್ದರೆ, ಜಿ.ಎಸ್.ಟಿ.2.0 ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಿ ಕಾರ್ಯಗತಗೊಳಿಸಲು ಸುಲಭವಾಗುವಂತೆ ರೂಪಿಸಲಾಗಿದೆ.
ಜಿಎಸ್‌ಟಿ 2.0 ತೆರಿಗೆ ವ್ಯವಸ್ಥೆಯಿಂದಾಗಿ ಆಟೋಮೊಬೈಲ್‌ಗಳು, ಸಿಮೆಂಟ್, ರಿಯಲ್ ಎಸ್ಟೇಟ್, ವಿಮೆ ಮತ್ತು ಕೃಷಿಯಂತಹ ಕ್ಷೇತ್ರಗಳಿಗೆ ಹೆಚ್ಚಿನ ಪರಿಣಾಮ ಮಾಡಲಿದ್ದು, ಜನಸಾಮಾನ್ಯರಿಗೆ ಇದರಿಂದ ಸಾಕಷ್ಟು ಅನುಕೂಲವಾಗುವ ಹಾಗೂ ಹಣದುಬ್ಬರ ಮತ್ತಷ್ಟು ತಗ್ಗಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.ಇದೇ ವೇಳೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಮುಖ್ಯ ಉದ್ದೇಶ ಹಾಗೂ ಈವರೆಗೆ ಕೈಗೊಂಡಿರುವ ನಾನಾ ಕಾರ್ಯ ಯೋಜನೆಗಳ ಕುರಿತು ವಿವರಿಸಿದರಲ್ಲದೆ, ವ್ಯಾಪಾರಸ್ಥರು, ವರ್ತಕರು ಮತ್ತು ಕೈಗಾರಿಕಾ ಉದ್ದಿಮೆಗಳಿಗೆ ಅನುಕೂಲವಾಗುವಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಗಾಗ್ಗೆ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.ಲೆಕ್ಕಪರಿಶೋಧಕ ರಾಜೇಶ ಕುಮಾರ ಟಿ.ಆರ್. ಶೇ.12 ಮತ್ತು ಶೇ.28 ತೆರಿಗೆ ಸ್ಲ್ಯಾಬ್‌ಗಳನ್ನು ತೆಗೆದುಹಾಕುವ ಹೊಸ ಜಿಎಸ್‌ಟಿ 2.0 ಘೋಷಣೆಯ ಮುಖ್ಯ ಉದ್ದೇಶಗಳ ಕುರಿತು ತಿಳಿಸಿದರು.
ಜಿಎಸ್‌ಟಿ 2.0 ಐಷಾರಾಮಿ ಖರೀದಿಗಳಿಗೆ ಶೇ.40 ಹೆಚ್ಚಿನ ಸ್ಲ್ಯಾಬ್ ಅನ್ನು ಪ್ರಸ್ತಾಪಿಸುತ್ತದೆ, ಇದರಿಂದಾಗಿ ಶೇ.5 ಮತ್ತು ಶೇ.18 ಸ್ಲ್ಯಾಬ್‌ಗಳಿಗೆ ಬದಲಾವಣೆಯು ಆದಾಯದ ಮೇಲೆ ಪರಿಣಾಮ ಬೀರುವುದಿಲ್ಲ. ಶಾಂಪು, ಸೋಪ್‌ಗಳು, ಟೂತ್‌ಪೇಸ್ಟ್, ಬೆಣ್ಣೆ, ತುಪ್ಪ, ಚೀಸ್ ಮತ್ತು ಬ್ರೆಡ್‌ಗಳಂತಹ ದಿನನಿತ್ಯದ ಅಗತ್ಯ ವಸ್ತುಗಳು ಈಗ ಕನಿಷ್ಠ ಶೇ. 5 ತೆರಿಗೆ ಆಕರ್ಷಿಸುತ್ತವೆ. ವಿವಿಧ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆರೋಗ್ಯ ರಕ್ಷಣೆ, ವಿಮೆ ಮತ್ತು ಲೇಖನ ಸಾಮಗ್ರಿಗಳಂತಹ ಶಿಕ್ಷಣ ಸಂಬಂಧಿತ ವಸ್ತುಗಳ ಮೇಲೂ ಯಾವುದೇ ತೆರಿಗೆ ಇರುವುದಿಲ್ಲ ಎಂದು ರಾಜೇಶ ಕುಮಾರ ತಿಳಿಸಿದರು.ಬೆಂಗಳೂರಿನ ಹಿರಿಯ ಲೆಕ್ಕಪರಿಶೋಧಕ ಮುಸನಳ್ಳಿ ರಾಘವೇಂದ್ರ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅವ್ವಾರು ಮಂಜುನಾಥ, ಉಪಾಧ್ಯಕ್ಷ ಸೋಂತ ಗಿರಿಧರ, ಜಂಟಿ ಕಾರ್ಯದರ್ಶಿ ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ.ರಾಮಚಂದ್ರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವರ್ತಕರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲೆಕ್ಕಪರಿಶೋಧಕ ಕೆ.ರಾಜಶೇಖರ್ ಹಾಗೂ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶ್ ಬಾಬು ಕಾರ್ಯಕ್ರಮ ನಿರ್ವಹಿಸಿದರು.