ಬಳ್ಳಾರಿ: ಕ್ಷಯರೋಗಕ್ಕೆ ಆರು ತಿಂಗಳುಗಳ ಕಾಲ ಸೂಕ್ತ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದಾಗಿದ್ದು, ಕಾಯಿಲೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಹೇಳಿದರು.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ನಗರದ ಬಂಡಿಹಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಕ್ಷಯರೋಗದ ಚಿಕಿತ್ಸೆಯನ್ನು ಸರಿಯಾಗಿ ಪಡೆದು ಗುಣಮುಖರಾದವರಿಗೆ ಹಾಗೂ ನಿಗದಿಯಂತೆ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರಿಗೆ ಬೆಂಬಲವಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕ್ಷಯ ರೋಗಿಗಳಿಗೆ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಿ ಲಭ್ಯವಿದೆ. ಬಂಡಿಹಟ್ಟಿಯಲ್ಲಿ 43 ಜನರಿಗೆ ಜೆಎಸ್‍ಡಬ್ಲ್ಯೂ ಫೌಂಡೇಶನ್ ಮೂಲಕ ಪೌಷ್ಟಿಕ ಆಹಾರ ಕಿಟ್‍ಗಳನ್ನು ಒದಗಿಸಿದ್ದು, ಕ್ಷಯರೋಗ ಬಾಧಿತರು ಪ್ರತಿದಿನ ಪೌಷ್ಟಿಕ ಆಹಾರದೊಂದಿಗೆ ಮಾತ್ರೆಗಳನ್ನು ಸಹ ತಪ್ಪದೇ ಸೇವಿಸಬೇಕು. ಯಾರಿಗಾದರೂ ಎರಡು ವಾರಕ್ಕಿಂತ ಹೆಚ್ಚು ದಿನಗಳ ಕೆಮ್ಮು ಇದ್ದಲ್ಲಿ ತಪ್ಪದೇ ಪರೀಕ್ಷೆ ಮಾಡಿಸುವ ಮೂಲಕ ಬಳ್ಳಾರಿಯನ್ನು ಕ್ಷಯ ಮುಕ್ತ ಮಾಡುವುದಕ್ಕೆ ಬೆಂಬಲ ನೀಡಿರಿ ಎಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ಲಾ ಮಾತನಾಡಿದರು. ಕ್ಷಯರೋಗದ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ, ಚಿಕಿತ್ಸೆ ಪಡೆಯುವವರಿಗೆ ಮತ್ತು ಕ್ಷೇತ್ರ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿ, ಔಷಧಿ ಅಧಿಕಾರಿ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಲಾಯಿತು.ಆಡಳಿತ ವೈದ್ಯಾಧಿಕಾರಿ ಡಾ.ಯಾಸ್ಮಿನ್, ಡಾ.ನಿಜಾಮುದ್ದಿನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ, ಆರೋಗ್ಯ ನಿರೀಕ್ಷಣಾಧಿಕಾರಿ ಪಂಪಾಪತಿ, ಔಷಧಿ ಅಧಿಕಾರಿ ಖರಿಮುನ್ನೀಸಾ ಬೇಗಂ, ಜಿಲ್ಲಾ ಮೆದುಳು ಆರೋಗ್ಯದ ಸಲಹೆಗಾರ ಸಣ್ಣ ಕೇಶವ, ಎಸ್‍ಟಿಎಸ್ ಓಬಳರೆಡ್ಡಿ, ಎಸ್‍ಟಿಎಲ್‍ಎಸ್ ಬಸವರಾಜ್ ರಾಜಗುರು, ಟಿಬಿಎಚ್‍ವಿ ಪ್ರದೀಪ್, ಜೆಎಸ್‍ಡಬ್ಲ್ಯು ಫೌಂಡೇಶನ್ ಯುಎಇಎಸ್ ರಾಜೇಶ್ ಭಾರತೀಯ, ಡಾ.ಕಾಶಿಪ್ರಸಾದ್, ಪರಿಮಳ ಹಾಗೂ ಪಾರ್ವತಿ, ಮಹಾಲಿಂಗ ಸೇರಿದಂತೆ ಆಶಾ ಕಾರ್ಯಕರ್ತೆಯರು, ಸಿಬ್ಬಂದಿಯವರು, ಸಾರ್ವಜನಿಕರು ಉಪಸ್ಥಿತರಿದ್ದರು.