ಕನ್ನಡಪ್ರಭ ವಾರ್ತೆ ಆಳಂದ
ಎರಡು ವಾರ ಅಥವಾ ಹೆಚ್ಚಿನ ಅವಧಿಯ ಕೆಮ್ಮು, ಕಫದ ಜೊತೆಗೆ ರಕ್ತ ಕಾಣಿಸುವುದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಜ್ವರ ಬರುವುದು, ತೂಕದ ಇಳಿಕೆ, ರಾತ್ರಿ ವೇಳೆ ಬೆವರುವುದು, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿವೆ. ಆಗ ಇದರ ಬಗ್ಗೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಟಿ.ಬಿ ಕಾಯಿಲೆಯ ಪರೀಕ್ಷೆ ಮಾಡಿಸಿಕೊಂಡು, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಮಹಾಂತಪ್ಪ ಹಾಳಮಳಿ ಹೇಳಿದರು.ಆಳಂದ ರಸ್ತೆಯ ’ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ’ವಿಶ್ವ ಕ್ಷಯರೋಗ ನಿರ್ಮೂಲನಾ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕ್ಷಯರೋಗ ಮುಕ್ತ ಭಾರತಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ಕ್ಷಯ ಸಂಪೂರ್ಣವಾಗಿ ಗುಣಮುಖವಾಗುವಂತಹ ರೋಗವಾಗಿದೆ. ಇದು ರೋಗಿಯು ಸೀನಿದಾಗ ಮತ್ತು ಕೆಮ್ಮಿದಾಗ ಗಾಳಿಯ ಮೂಲಕ ಹರಡುತ್ತದೆ. ಮುಟ್ಟುವುದರಿಂದ, ಕೈ ಕುಲುಕುವುದರಿಂದ ಬರುವುದಿಲ್ಲ. ಕ್ಷಯ ರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಿ. ಹಸಿರು ತರಕಾರಿ, ಹಾಲು, ಹಣ್ಣು, ಮೊಟ್ಟೆ, ಮೀನು ಸೇವನೆ ಮಾಡಬೇಕು. ಎಣ್ಣೆಯಲ್ಲಿ ಬೇಯಿಸಿದ, ಕರಿದ ಆಹಾರಗಳ ಸೇವನೆ ಬೇಡ ಎಂದು ರೋಗಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ-ಸೂಚನೆಗಳನ್ನು ನೀಡಿದರು.ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ವಿಶ್ವಸಂಸ್ಥೆ ಕ್ಷಯರೋಗ ಮುಕ್ತ ವಿಶ್ವವನ್ನು ೨೦೩೦ನೇ ವರ್ಷದ ಗುರಿಯನ್ನಾಗಿರಿಸಿಕೊಂಡಿದೆ. ಆದರೆ ಭಾರತ ೨೦೨೫ಕ್ಕೆ ಕ್ಷಯರೋಗ ಮುಕ್ತ ದೇಶವನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಕೇವಲ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳು ಮಾತ್ರ ಶ್ರಮಿಸಿದರೆ ಸಾಲದು. ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ನವಾಬಖಾನ್, ಸೈಯದ್ ಹಮೀದ್, ಸೈಯದ್ ಜಾಫರ್, ಸೈಬಣ್ಣ ಹೂಗಾರ ಸೇರಿದಂತೆ ಇನ್ನಿತರರಿದ್ದರು.