ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಆಂಧ್ರಪ್ರದೇಶದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ರವರು ಬುಧವಾರ ಆಂಧ್ರದ ಮುಖ್ಯಮಂತ್ರಿಯಾಗಿ ಹಾಗೂ ಉಪಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಾಗೇಪಲ್ಲಿಯಲ್ಲಿ ಕಮ್ಮವಾರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಕಮ್ಮ ಸಮುದಾಯದ ಮುಖಂಡರು ಹಾಗೂ ಚಂದ್ರಬಾಬು ನಾಯ್ಡು ಮತ್ತು ತೆಲುಗು ಚಿತ್ರ ನಟ ಪವನ್ ಕಲ್ಯಾಣ್ ರವರ ಅಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಲಾಡು ವಿತರಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.ಕಮ್ಮವಾರಿ ಸೇವಾ ಟ್ರಸ್ಟ್ ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಆಂಧ್ರಪ್ರದೇಶದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷ ಪ್ರಚಂಡ ಗೆಲುವು ಸಾಧಿಸಿದ್ದು, ಇಂದು ನೂತನ ಮುಖ್ಯಮಂತ್ರಿಯಾಗಿ ತೆಲುಗುದೇಶಂ ಪಕ್ಷದ ಅಧ್ಯಕ್ಷ ನಾ.ರಾ.ಚಂದ್ರಬಾಬು ನಾಯ್ಡು ರವರು ಪದಗ್ರಹಣ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಹೆಚ್ಚು ಸ್ಥಾನಗಳಲ್ಲಿ ವಿಜಯ ಸಾಧಿಸಿ, ಎನ್.ಡಿ.ಎ ಮೈತ್ರಿ ಕೂಟದಲ್ಲಿ ಕೇಂದ್ರ ಸರ್ಕಾರದ ರಚನೆಯಲ್ಲಿ ಚಂದ್ರಬಾಬು ನಾಯ್ಡು ಕಿಂಗ್ ಮೇಕರ್ ಆಗಿರುವುದು ಹೆಮ್ಮೆಯ ವಿಚಾರ ಎಂದರು.ಜೆಡಿಎಸ್ ಮುಖಂಡ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು ಮಾತನಾಡಿ, ತೆಲುಗು ದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಇಂದು ಮುಖ್ಯಮಂತ್ರಿಯಾಗಿ, ಜನಸೇನಾ ಪಕ್ಷದ ಅಧ್ಯಕ್ಷ , ಚಿತ್ರ ನಟ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಮ್ಮವಾರಿ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಕೆ.ಸಿ.ವೆಂಕಟರಮಣಪ್ಪ, ಉಪಾಧ್ಯಕ್ಷ ಪ್ರಭಾಕರ್ ನಾಯ್ಡು, ಕಾರ್ಯದರ್ಶಿ ಚಲಪತಿ, ಖಜಾಂಚಿ ಸಿ.ಚಲಪತಿ, ಸೇವಾ ಟ್ರಸ್ಟ್ ಸದಸ್ಯರಾದ ರಾಮಚಂದ್ರಪ್ಪ, ಕೆ.ಆರ್.ವೆಂಕಟರಮಣಪ್ಪ, ಮುನಿರಾಜು, ಪ್ರವೀಣ್, ಕೆ.ಆರ್.ಯಲ್ಲಪ್ಪ, ಧನ್ಪಾಲ್, ಗೋವಿಂದನಾಯ್ಡು, ಕೆ.ಆರ್.ಶ್ರೀನಿವಾಸ್, ಭಾಸಿನಿ ಯಲ್ಲಪ್ಪ, ಪುರಸಭೆ ಸದಸ್ಯೆ ಸುಜಾತಾ ನರಸಿಂಹನಾಯ್ಡು ಸೇರಿ ಕಮ್ಮ ಸಮುದಾಯದ ಮುಖಂಡರು ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳು ಇದ್ದರು.