ಧೂಮಪಾನ ಅಡ್ಡೆಯಾಗುತ್ತಿರುವ ಟೀ ಸ್ಟಾಲ್‌ಗಳು

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸಹಿತ ಇತರೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಇದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಕೇಸು ಹಾಕಲು ಕೂಡ ಅವಕಾಶವಿದೆ.ಕಾನೂನು ಹೀಗೆ ಹೇಳುತ್ತಿದ್ದರೂ ಅಂಗಡಿ ಮಾಲಿಕರು ಲಾಭದ ಉದ್ದೇಶದಿಂದ ವಿದ್ಯಾರ್ಥಿ ಗಳಿಗೆ ಈ ಉತ್ಪನ್ನಗಳನ್ನು ಎಗ್ಗು ಸಿಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿರುವ ಬಹುತೇಕ ಕಾಂಡಿಮೆಂಟ್ಸ್, ಕಾಫಿ ಟೀ ಕೇಂದ್ರಗಳು ಧೂಮಪಾನದ ಅಡ್ಡೆಗಳಾಗಿ ಬದಲಾಗಿದ್ದು ಕೋಟ್ಪಾ ಕಾಯ್ದೆ ಇಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳೇ ಇವರ ಖಾಯಂ ಗ್ರಾಹಕರಾಗಿದ್ದು ಇವರ ಕೈಗೆ ಕಾಫೀ, ಟೀ, ಹಾಲು ಕೊಡುವ ಬದಲು ಬೀಡಿ ಸಿಗರೇಟು ನೀಡಿ ಧಮ್ ಎಳೆಯುವಂತೆ ಮಾಡುತ್ತಿದ್ದರೂ ಕ್ರಮ ವಹಿಸಬೇಕಾದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಕೋಟ್ಪಾಕಾಯ್ದೆ ಸೆಕ್ಷನ್ 4ರಂತೆ,ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸಹಿತ ಇತರೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದೆ. ಇದನ್ನು ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಕ್ರಿಮಿನಲ್ ಕೇಸು ಹಾಕಲು ಕೂಡ ಅವಕಾಶವಿದೆ.ಕಾನೂನು ಹೀಗೆ ಹೇಳುತ್ತಿದ್ದರೂ ಅಂಗಡಿ ಮಾಲಿಕರು ಲಾಭದ ಉದ್ದೇಶದಿಂದ ವಿದ್ಯಾರ್ಥಿ ಗಳಿಗೆ ಈ ಉತ್ಪನ್ನಗಳನ್ನು ಎಗ್ಗು ಸಿಗ್ಗಿಲ್ಲದೆ ಮಾರಾಟ ಮಾಡುತ್ತಾ ವಿದ್ಯಾರ್ಥಿಗಳ ಬದುಕಿನಲ್ಲಿ ಆಟವಾಡುತ್ತಿದ್ದಾರೆ.

ದಾರಿ ತಪ್ಪುತ್ತಿರುವ ಮಕ್ಕಳು

ತಂದೆತಾಯಿಗಳ ಈ ಉದಾಸೀನತೆ ಅಥವಾ ನಂಬಿಕೆಯಿಂದಾಗಿ ಮಕ್ಕಳು ಹಾಳಾಗಲು, ದಾರಿತಪ್ಪಲು ಕಾರಣವಾಗುತ್ತಿದೆ. ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಓದಿಗೆ ತಿಲಾಂಜಲಿಯಿಟ್ಟು ಕಾಂಡಿಮೆಂಟುಗಳು, ಗೂಡಂಗಡಿಗಳು, ಕಾಫೀಬಾರ್‌ಗಳಿಗೆ ಹೋಗಿ ದುಶ್ಚಟ ಗಳಿಗೆ ದಾಸರಾಗಿ, ಅಲ್ಲಯೇ ಹೆಚ್ಚು ಕಾಲ ಕಳೆಯುವ ಮೂಲಕ ಓದನ್ನು ಮರೆತು ಸಮಾಜಘಾತುಕರಾಗಿ ಬದಲಾಗು ತ್ತಿರುವುದು ಆಶ್ಚರ್ಯವಾದರೂ ಸತ್ಯ.

ಬೆಳಿಗ್ಗೆಯೇ ಶಾಲೆ-ಕಾಲೇಜಿಗೆ ಹೋಗವುದಾಗಿ ಮನೆಯಲ್ಲಿ ಹೇಳಿ ಬರುವ ಸಾಕಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಚಕ್ಕರ್ ಹೊಡೆದು ನೇರ ಧೂಮಪಾನ ಕೇಂದ್ರಗಳಾದ ಕಾಂಡಿಮೆಂಟ್ಸ್, ಗೂಡಂಗಡಿ ಮತ್ತು ಟೀಸ್ಟಾಲ್ ಗಳು ಗಳಿಗೆ ಬಂದು ಠೀಕಾಣಿ ಹೂಡಿದರೆ ಮತ್ತೆ ಮನೆಗೆ ಹೋಗುವುದು ಸಂಜೆಯೇ. ಅಲ್ಲಿಯವರೆಗೆ ಒಂದು ಕೈಯಲ್ಲಿ ಸಿಗರೇಟು ಹಿಡಿದರೆ, ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದು,ಅದರಲ್ಲಿ ವಿಡಿಯೋ, ಆನ್‌ಲೈನ್ ಗೇಮ್‌ಗಳನ್ನು ಆಡಿಯೋ ಕಾಲಹರಣ ಮಾಡುತ್ತಿದ್ದಾರೆ.

ಸ್ವಸ್ಥ ಸಮಾಜ ನಿರ್ಮಿಸಿ

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವೊಂದರಲ್ಲಿಯೇ 300ಕ್ಕೂ ಹೆಚ್ಚು ಕಾಂಡಿಮೆಂಟ್ಸ್, ಕಾಫೀ ಟೀ ಕೇಂದ್ರಗಳಿವೆ. ಇಲ್ಲಿ ತಿನ್ನುವ ಕುಡಿಯುವ ಪದಾರ್ಥಗಳ ಮಾರಾಟಕ್ಕೆ ಮಾತ್ರ ನಗರಸಭೆ ಆರೋಗ್ಯ ಇಲಾಖೆ, ಪರಿಸರ ಇಲಾಖೆ ಅನುಮತಿ ನೀಡಬೇಕು. ಇದನ್ನು ಮೀರಿ ತಂಬಾಕು, ಗಾಂಜಾ ಇತ್ಯಾದಿ ನಿಷೇಧಿತ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡಿದರೆ ಅಂಗಡಿಯನ್ನು ಸೀಜ್ ಮಾಡಬೇಕು. ಆತಂಕಕಾರಿ ಸಂಗತಿಯೆಂದರೆ ಗೂಡಂಗಡಿಗಳಲ್ಲಿ ಗಾಂಜಾ ಮಾರಾಟ ಕೂಡ ನಡೆಯುತ್ತಿದೆ ಎಂಬ ಅನುಮಾನವನ್ನು ಜನಪರ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಕೂಡಲೇ ಕ್ರಮವಹಿಸಿ ಅಕ್ರಮ ದಂಧೆಯನ್ನು ತಡೆಯಬೇಕು. ಇಲ್ಲವಾ ದಲ್ಲಿ ಭವಿಷ್ಯದಲ್ಲಿ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ ಎನ್ನುವುದು ಜನಸಾಮಾನ್ಯರು ನೀಡುವ ಎಚ್ಚರಿಕೆ ಮಾತಾಗಿದೆ.

Share this article