ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಶಿವಪುರದ ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಹೊಸ ವರ್ಷದ ಅಂಗವಾಗಿ ಆಯೋಜಿಸಿದ್ದ ಆಹಾರ ಮೇಳ ಹಾಗೂ 2026ನೇ ಸಾಲಿನ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕಗಳಿಗಷ್ಟೇ ಸೀಮಿತವಾಗದೆ ಆಚಾರ-ವಿಚಾರ, ನಡೆ-ನುಡಿ, ಸಂಸ್ಕೃತಿ, ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಇಂತಹ ಆಹಾರ ಮೇಳಗಳನ್ನು ಆಯೋಜಿಸಿರುವುದರಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೂ ಹೆಚ್ಚಿನ ಒತ್ತು ನೀಡಬಹುದಾಗಿದೆ ಎಂದರು.ಇತ್ತೀಚಿನ ದಿನಗಳಲ್ಲಿ ದೇಶೀಯ ಸಂಸ್ಕೃತಿಯನ್ನು ಮರೆತು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಯುವ ಜನಾಂಗ ಹಳ್ಳಿಗಳನ್ನು ಬಿಟ್ಟು ನಗರ ಪ್ರದೇಶಗಳತ್ತ ಗುಳೆ ಹೊರಟಿರುವ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗಿ ನಿರ್ಮಾಣಗೊಂಡು ಪರಂಪರೆ ಮತ್ತು ಸಂಸ್ಕೃತಿ ಕಣ್ಮರೆಯಾಗುತ್ತಿರುವುದು ವಿಷಾಧನೀಯ ಸಂಗತಿಯೆಂದರು.
ಶಿಕ್ಷಣ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದಲೂ ನಿರಂತರವಾಗಿ ಗುಣಮಟ್ಟದ ಶಿಕ್ಷಣ ಒದಗಿಸುವ ಜತೆಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡಲೆಂಬ ಉದ್ದೇಶದಿಂದ ಪ್ರತಿಭಾ ಕಾರಂಜಿ, ಆಹಾರ ಮೇಳ, ವಿಜ್ಞಾನ ವಸ್ತು ಪ್ರದರ್ಶನ, ಗಣಿತ ದಿವಸ ಇನ್ನಿತರ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಫಲಿತಾಂಶದ ಗುಣಮಟ್ಟವನ್ನು ಇಮ್ಮಡಿಗೊಳಿಸಿದ್ದಾರೆಂದರು.ಸಂಸ್ಥೆಯ ಅಧ್ಯಕ್ಷೆ ಪಿ.ಕಸ್ತೂರಿ ಮಾತನಾಡಿ ಹೊಸ ವರ್ಷವು ಪ್ರತಿಯೊಬ್ಬರಿಗೂ ಒಳಿತು ಮಾಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲೆಂದು ಹಾರೈಸಿದರಲ್ಲದೆ ಶಿಕ್ಷಕರೇ ವಿದ್ಯಾರ್ಥಿಗಳಿಗಾಗಿ ಹಲವು ಬಗೆಯ ತಿಂಡಿ ತಿನಿಸುಗಳನ್ನು ಮಾಡುವುದರ ಮೂಲಕ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿ ಆಹಾರ ಮೇಳಕ್ಕೆ ಮೆರಗನ್ನು ನೀಡಿದ್ದಾರೆಂದು ಬಣ್ಣಿಸಿದರು.
ದಿನದರ್ಶಿಕೆ ಬಿಡುಗಡೆ:ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ 2026ನೇ ಸಾಲಿನ ದಿನದರ್ಶಿಕೆ ಹಾಗೂ ದಿನಚರಿಯನ್ನು ಆಹಾರ ಮೇಳದ ಕಾರ್ಯಕ್ರಮದ ವೇಳೆ ಬಿಡುಗಡೆಗೊಳಿಸಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದರು.
ಆಹಾರ ಮೇಳೆ:ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಹಲವು ಬಗೆಯ ಸಿಹಿ ತಿಂಡಿ ತಿನಿಸುಗಳನ್ನು ತಾವೇ ತಯಾರಿಸಿ ಮಾರಾಟ ಮಾಡುವುದರ ಮೂಲಕ ಮಕ್ಕಳ ಶೈಕ್ಷಣಿಕ ಮತ್ತು ದಿನನಿತ್ಯದ ವ್ಯವಹಾರಿಕದ ಬಗ್ಗೆ ಗಮನ ಸೆಳೆದರಲ್ಲದೆ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ತಿಂಡಿ ತಿನಿಸುಗಳನ್ನು ಕೊಳ್ಳುತ್ತಿದ್ದುದ್ದು ಕಂಡು ಬಂತು.
ಈ ವೇಳೆ ಸಂಸ್ಥೆಯ ಮುಖ್ಯ ಶಿಕ್ಷಕ ಎಚ್.ಆರ್.ಅನಂತೇಗೌಡ, ಸಿ.ಆರ್.ಪಿ. ನಾಗೇಶ್, ಹೇಮಲತಾ, ಪುರಸಭೆ ಮಾಜಿ ಅಧ್ಯಕ್ಷೆ ಸೌಭಾಗ್ಯ ಮಹದೇವು ಹಾಗೂ ಶಿಕ್ಷಕರು ಹಾಜರಿದ್ದರು.