ಚನ್ನಪಟ್ಟಣ: ಹೆತ್ತವರನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ನಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ನಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಭಾರತೀಯ ವೈದ್ಯಕೀಯ ಮಹಾವಿದ್ಯಾಲಯದ ವಿಶ್ರಾಂತ ನಿರ್ದೇಶಕ ಹಾಗೂ ವಾಗ್ಮಿ ಡಾ.ಕೆ.ಪಿ.ಪುತ್ತೂರಾಯ ತಿಳಿಸಿದರು.
ನಗರದ ಶತಮಾನೋತ್ಸವ ಭವನದಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಹಾಗೂ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ತಿಟ್ಟಮಾರನಹಳ್ಳಿ ಗೌರಮ್ಮ- ವೆಂಕಟಗಿರಿಗೌಡ ಸ್ಮಾರಕ ದತ್ತಿ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸೇವಾ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವದಲ್ಲಿ ಭಾರತೀಯ ಸಂಸ್ಕೃತಿ ಶ್ರೇಷ್ಠವಾದದ್ದು. ಮಕ್ಕಳಿಗೆ ವಿದ್ಯೆಯ ಜತೆಗೆ ಸಂಸ್ಕಾರವನ್ನು ಕಲಿಸಿ. ಸಂಸ್ಕಾರವಂತ ಮಕ್ಕಳಾರೂ ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ. ಮಕ್ಕಳೇ ಮನೆಯ ನಂದಾದೀಪ, ನೀವು ಚಿನ್ನದ ಪದಕ ಗಳಿಸದಿದ್ದರೂ ಪರವಾಗಿಲ್ಲ. ಆದರೆ, ಪೋಷಕರನ್ನು, ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಗೌರವಿಸುವುದು ಕಲಿಯಬೇಕು. ಗಳಿಸಿದ್ದನ್ನು ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಶ್ರೇಷ್ಠವೆಂದು ಅರಿತಿರುವ ವಕೀಲ ಟಿ.ವಿ.ಗಿರೀಶ್ ತಮ್ಮ ತಂದೆ-ತಾಯಿ ಹೆಸರಿನಲ್ಲಿ ದತ್ತಿ ಸ್ಥಾಪಿಸಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಮಾತನಾಡಿ, ಇಂದು ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಠ ಹೆಚ್ಚಾಗುತ್ತಿದೆ. ಎಷ್ಟೋ ಕಡೆ ವೃದ್ಧರನ್ನು ಮನೆಯಲ್ಲಿಟ್ಟುಕೊಂಡರೂ ಅದು ಅವರಿಗೆ ಸೆರೆಮನೆಯಂತಾಗಿದೆ. ಮನುಷ್ಯ ಸಂಬಂಧಗಳು ಮುರಿದುಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ವಕೀಲರ ಸಂಘದ ಅಧ್ಯಕ್ಷ ಹಾಗೂ ದತ್ತಿದಾನಿ ಟಿ.ವಿ.ಗಿರೀಶ್ ಮಾತನಾಡಿ, ಇಂದು ನಾನು ಏನಾದರೂ ಸಾಧಿಸಿದ್ದರೆ, ಅದಕ್ಕೆ ನನ್ನ ಪೋಷಕರು ಹಾಗೂ ಕುಟುಂಬದವರೇ ಕಾರಣ. ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಮ್ಮ ತಂದೆ-ತಾಯಿ ಹೆಸರಿನಲ್ಲಿ ಸೇವೆ ಮಾಡುತ್ತಿದ್ದೇನೆ ಎಂದರು.
ವಿವಿಧ ಸಾಧಕರಿಗೆ ಸೇವಾ ಪ್ರಶಸ್ತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ಬಸವಪ್ಪನವರ ಪುಣ್ಯಕ್ಷೇತ್ರದ ಧರ್ಮದರ್ಶಿ ಮಲ್ಲೇಶ್ ಗುರೂಜಿ, ರಾಜ್ಯ ಕುಕ್ಕುಟ ಮಹಾಮಂಡಳದ ಮಾಜಿ ಅಧ್ಯಕ್ಷ ಡಿ.ಕೆ.ಕಾಂತರಾಜು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ವೀರೇಗೌಡ, ಪೌರಾಯುಕ್ತ ಪುಟ್ಟಸ್ವಾಮಿ, ಸಮಾಜ ಸೇವಕ ಉದಯ್‌ಸಿಂಗ್, ಬುದ್ಧ, ಬಸವ, ಗಾಂಧಿ ಟ್ರಸ್ಟ್‌ನ ಅಧ್ಯಕ್ಷ ರಾಮಲಿಂಗೇಶ್ವರ(ಸಿಸಿರಾ), ನಗರಸಭೆ ಸದಸ್ಯರಾದ ಸತೀಶ್ ಬಾಬು, ವಾಸೀಲ್ ಅಲಿಖಾನ್, ಭಾವಿಪದ ವಸಂತ್ ಕುಮಾರ್, ಗುರುಮಾದಯ್ಯ, ಡಾ.ರಾಜಶ್ರೀ ಇತರರಿದ್ದರು.