ಸವಣೂರು: ಜಂಗಮ ಮಕ್ಕಳಿಗೆ ಸಂಸ್ಕಾರ ನೀಡುವ ಉದ್ದೇಶದಿಂದ ಶ್ರೀಮಠದಲ್ಲಿ ಉಚಿತ ಧಾರ್ಮಿಕ ಸಂಸ್ಕಾರ ಶಿಬಿರ ಏರ್ಪಡಿಸಲಾಗಿದೆ ಎಂದು ಚನ್ನವೀರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಹೂವಿನಶಿಗ್ಲಿ ವಿರಕ್ತಮಠದ ಶ್ರೀಗುರು ನಿರಂಜನ ವೇದ ಜೋತಿಷ್ಯ ಸಂಸ್ಕೃತ ಪಾಠಶಾಲೆಯಲ್ಲಿ ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಕಾಲ ಜಂಗಮ ವಿದ್ಯಾರ್ಥಿಗಳಿಗೆ ಉಚಿತ ಧಾರ್ಮಿಕ ಸಂಸ್ಕಾರ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನುಷ್ಯ ಹುಟ್ಟಿನಿಂದ ಸಾವಿನವರೆಗೂ ಜಂಗಮರು ಸಂಸ್ಕಾರ ನೀಡುವುದು ಅವಶ್ಯವಾಗಿದೆ. ಜಂಗಮರ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಅಳವಡಿಸಿದಲ್ಲಿ ಮಾತ್ರ ಸಮಾಜದ ಇತರರಿಗೂ ಜ್ಞಾನದೊಂದಿಗೆ ಸಂಸ್ಕಾರ ಬಿತ್ತರಿಸಲು ಸಾಧ್ಯವಾಗಲಿದೆ. ಆದ್ದರಿಂದ ಬೇಸಿಗೆ ರಜೆ ದಿನದಲ್ಲಿ ಜಂಗಮ ಮಕ್ಕಳಿಗೆ ಸಂಸ್ಕಾರ ನೀಡುವುದು ಶಿಬಿರದ ಉದ್ದೇಶವಾಗಿದೆ. ಶಿಕ್ಷಕ ಪ್ರಭುಲಿಂಗಯ್ಯ ಆರಾಧ್ಯಮಠ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂದಿನ ಜಂಗಮ ವಟುಗಳು ನಾಳಿನ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಬುನಾದಿಯಾಗಿದ್ದಾರೆ. ಅಂತಹ ವಟುಗಳಿಗೆ ಶ್ರೀಮಠದ ಪೂಜ್ಯರು ಉಚಿತ ಶಿಬಿರ ಆಯೋಜನೆ ಮೂಲಕ ದೂರದೃಷ್ಟಿಯಿಂದ ಉನ್ನತ ಸಂಸ್ಕೃತ ಪಾಠದೊಂದಿಗೆ ಪೂಜಾ ಕೈಂಕರ್ಯಗಳನ್ನು ಒಳಗೊಂಡ ಸಂಸ್ಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಹುಬ್ಬಳ್ಳಿ ಮೂರುಸಾವಿರ ಮಠದ ಸಂಸ್ಕೃತ ಶಿಕ್ಷಕ ಕೂಡಲಯ್ಯ ಹಿರೇಮಠ ಶಿಬಿರದ ನೇತೃತ್ವ ವಹಿಸಿ ಮಾತನಾಡಿ, ಜಂಗಮರ ಮಕ್ಕಳು(ವಟುಗಳು) ಧಾರ್ಮಿಕ ಕೈಂಕರ್ಯ ಕೈಗೊಳ್ಳಲು ಮುಂದಾಗಬೇಕು ಎಂದರು. ಪ್ರಮುಖರಾದ ನಿಂಗಣ್ಣ ಹೆಬಸೂರ, ರೇಣುಕಗೌಡ ಪಾಟೀಲ, ಅನ್ನದಾನಯ್ಯ ಹಿರೇಮಠ, ಶಿವಾನಂದ ಕಟ್ಟಿಮನಿ ಹಾಗೂ ಇತರರು ಪಾಲ್ಗೊಂಡಿದ್ದರು. ಅಭಿಷೇಕಶಾಸ್ತ್ರಿ, ಡಾ. ಎನ್.ಬಿ. ನಾಗರಹಳ್ಳಿ, ಮಹಾದೇವ ಬಿಷ್ಠಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.ಎನ್‌ಎಸ್‌ಎಸ್ ವಾರ್ಷಿಕ ಶಿಬಿರಕ್ಕೆ ಚಾಲನೆ
ಹಾವೇರಿ: ಇಲ್ಲಿನ ಗಾಂಧಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದಿಂದ ಇತ್ತೀಚೆಗೆ ಹೊಂಬರಡಿ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.ಶಿಬಿರವನ್ನು ಕಾಲೇಜಿನ ಸಿಡಿಸಿ ಸದಸ್ಯ ನಿಜಲಿಂಗಪ್ಪ ಬಸೇಗಣ್ಣಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿ, ಪ್ರತಿಯೊಬ್ಬ ಶಿಬಿರಾರ್ಥಿಗಳು ಎನ್‌ಎಸ್‌ಎಸ್ ಶಿಬಿರದಿಂದ ಆಗುವ ಎಲ್ಲ ರೀತಿಯ ಪ್ರಯೋಜನಗಳನ್ನು ಸರಿಯಾದ ರೀತಿಯಲ್ಲಿ ಪಡೆದುಕೊಂಡು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆಯನ್ನು ಹೊಂಬರಡಿ ಗ್ರಾಪಂ ಅಧ್ಯಕ್ಷ ಹೇಮನಗೌಡ ಬೇವಿನಮರದ ವಹಿಸಿ ಮಾತನಾಡಿ, ನಮ್ಮ ಊರಿಗೆ ಬಂದಿರುವ ಎಲ್ಲ ಶಿಬಿರಾರ್ಥಿಗಳು ತಮಗೆ ಎಷ್ಟು ಸಾಧ್ಯವಾಗುತ್ತದೆಯೋ ಅಷ್ಟು ತಮ್ಮ ಸೇವೆಯನ್ನು ಸಲ್ಲಿಸಬೇಕು ಎಂದರು.ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಎಸ್‌ಡಿಎಂಸಿ ಅಧ್ಯಕ್ಷ ಶರಣಬಸನಗೌಡ ಚನ್ನಗೌಡ್ರು ಆಗಮಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಫರ್ಜಾನ ಪಠಾಣ ಮಾತನಾಡಿ, ವಿದ್ಯಾರ್ಥಿಗಳು ಈ ಗ್ರಾಮಸ್ಥರಿಗೆ ತೊಂದರೆಯಾಗದಂತೆ, ಶಿಸ್ತಿನಿಂದ ಶಿಬಿರದ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರಬೇಕೆಂದರು.ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಬಿ. ನಾಗಲಾಪುರ ಮಾತನಾಡಿ, ಎನ್‌ಎಸ್‌ಎಸ್ ಎಂಬುದು ಪ್ರತಿ ವಿದ್ಯಾರ್ಥಿಯು ಮುಂದಿನ ದಿನಗಳಲ್ಲಿ ಸಮಾಜವನ್ನು ಹೇಗೆ ಎದುರಿಸುತ್ತಾನೆ ಮತ್ತು ಅದರೊಂದಿಗಿನ ತಮ್ಮ ಸಂವಹನವನ್ನು ಸರಿಪಡಿಸಿಕೊಳ್ಳಲು ಇದು ಸದಾವಕಾಶ ಎಂದರು.
ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಹಾಗೂ ಊರಿನ ನಾಗರಿಕರು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಎನ್‌ಎಸ್‌ಎಸ್ ಘಟಕಾಧಿಕಾರಿ ಪ್ರೊ. ಶಂಕ್ರಪ್ಪ ಹಂಗನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಗಾಯತ್ರಿ, ಸಂತೋಷ್‌ಕುಮಾರ್ ಡಿ.ಎಸ್., ಮಲ್ಲಿಕಾರ್ಜುನ್‌ಗೌಡ ಮತ್ತಿತರರು ಇದ್ದರು.