ಮಹರ್ಷಿಗಳ ಆದರ್ಶ ಗುಣಗಳನ್ನು ಮಕ್ಕಳಿಗೆ ಕಲಿಸಿ

KannadaprabhaNewsNetwork | Published : Oct 18, 2024 12:16 AM

ಸಾರಾಂಶ

ಕೊಳ್ಳೇಗಾಲದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಶಾಸಕ ಎಆರ್‌ ಕೃಷ್ಣಮೂರ್ತಿ ಚಕ್ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮಹರ್ಷಿ ವಾಲ್ಮೀಕಿ ಅವರ ತತ್ವಾದರ್ಶಗಳು ಸಾರ್ವಕಾಲಿಕವಾದುದ್ದು, ಯುವ ಪೀಳಿಗೆ ಮಹರ್ಷಿಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಗುವ ಮೂಲಕ ನವ ಸಮಾಜ ನಿರ್ಮಾಣ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಶಾಸಕ ಎಆರ್ ಕೃಷ್ಣಮೂರ್ತಿ ಹೇಳಿದರು.ತಾಲೂಕು ಆಡಳಿತ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಭಾರತ ದೇಶಕ್ಕೆ ರಾಮಾಯಣ ಮಹಾಕಾವ್ಯವನ್ನು ನೀಡಿದ ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತದ್ದು, ಇದರಿಂದ ಯುವ ಸಮುದಾಯದ ಉತ್ತಮ ಬದುಕು ನಡೆಸಲು ಸಾಧ್ಯವಿದೆ, ಮಹರ್ಷಿಗಳ ಆದರ್ಶ ಗುಣಗಳನ್ನು ಸಮಾಜ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕೊಡಿಸುವಂತಾಗಬೇಕು ಎಂದರು.

3 ಗಂಟೆ ತಡವಾಗಿದ್ದಕ್ಕೆ ವಿಷಾಧಿಸಿದ ಶಾಸಕ:

ಸಮಾರಂಭದಲ್ಲಿ ಮಾತನಾಡುವ ವೇಳೆ ಕಾರ್ಯಕ್ರಮಕ್ಕೆ 3 ಗಂಟೆ ವಿಳಂಬವಾಗಿದ್ದಕ್ಕೆ ಶಾಸಕ ಕೃಷ್ಣಮೂರ್ತಿ ಅವರು ವಿಷಾದಿಸಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸರ್ಕಾರದ ವತಿಯಿಂದ ಇಂದು ಶಂಕುಸ್ಥಾಪನೆ ನೆರವೇರಿಸಬೇಕು ಎಂಬ ಒತ್ತಾಯಗಳು ನಾಯಕ ಸಮುದಾಯದಿಂದ ಬಂದಿತ್ತು. ಇಲ್ಲವಾದರೆ, ನಾವೇ ಶಂಕುಸ್ಥಾಪನೆ ಮಾಡುತ್ತೇವೆ ಎಂಬ ಗೊಂದಲಸೃಷ್ಟಿಯಾಗಿತ್ತು. ಇದನ್ನರಿತ ತಾವು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಶಾಸಕರಾದ ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್ ಅವರೊಂದಿಗೆ ಬೆಳಗ್ಗೆ ಮುಂಚಿತವಾಗಿ ಚರ್ಚೆ ನಡೆಸಿ, ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದೇವೆ. ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಪ್ರತಿಮೆ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾಧ್ಯಕ್ಷ ಬಿ.ಚಂದ್ರು ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಇಂದಿನ ದಿನವನ್ನು ಮಹತ್ವವಾದ ದಿನ ಎಂದು ಭಾವಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನೇ ಖುದ್ದು ಚಾಮರಾಜನಗರಕ್ಕೆ ಬಂದು ಎಲ್ಲರ ಒತ್ತಾಯದಂತೆ ಶ್ರೀ ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನೆರವೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಇದೇ ವೇಳೆ ವೇದಿಕೆಯಲ್ಲಿ ಅಂತರಜಾತಿ ವಿವಾಹಿತರಾದ ಕೆಂಪನಪಾಳ್ಯ ನೀಲಾಂಬ ಮತ್ತು ಮಾದಪ್ಪ ಅವರಿಗೆ 3 ಲಕ್ಷದ ಬಾಂಡ್, ಪಟ್ಟಣದ ನಾಯಕರ ದೊಡ್ಡ ಬೀದಿ ನಿವಾಸಿ ಸಂತೋಷ್ ಹಾಗೂ ಅನುಷ ಅವರಿಗೆ 2.5ಲಕ್ಷ ರು. ಪ್ರೋತ್ಸಾಹ ಧನದ ಬಾಂಡ್‌ಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಶಾಸಕರು ವಿತರಿಸಿದರು. ಉಪನ್ಯಾಸಕ ಶೈಲಕುಮಾರ್ ಮುಖ್ಯ ಭಾಷಣದಲ್ಲಿ ಪಾಲ್ಗೊಂಡು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ತಂದೆ, ತಾಯಿ ಹಾಗೂ ಗುರು ಹಿರಿಯರಿಗೆ ಮತ್ತು ಅತಿಥಿಗಳಿಗೆ ಯುವ ಸಮುದಾಯಗಳಿಂದ ಗೌರವ ನೀಡುತ್ತಿಲ್ಲ, ಇದು ದುರಂತ ಎಂದು ವಿಷಾದಿಸಿದರು.

Share this article