ಮಕ್ಕಳಿಗೆ ರಾಮನ ಆದರ್ಶ ಕಲಿಸಿ: ವಿಲಾಸರಾಜ್ ಪ್ರಸನ್ನ

KannadaprabhaNewsNetwork |  
Published : Oct 27, 2026, 02:45 AM IST
26ಎಚ್.ಎಲ್.ವೈ-1(ಎ): ಸೋಮವಾರ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. | Kannada Prabha

ಸಾರಾಂಶ

ರಾಮಾಯಣವು ಕೇವಲ ಒಂದು ಕಥೆಯಲ್ಲ, ಅದು ನಮ್ಮ ಭಾರತೀಯ ಸಂಸ್ಕೃತಿಯ ಜೀವಂತ ಆದರ್ಶ. ರಾಮಾಯಣ ನಮಗೆ ಧರ್ಮ ಯಾವುದು, ಅಧರ್ಮ ಯಾವುದು ಎಂದು ತೋರಿಸುವ ದಾರಿದೀಪವಾಗಿದೆ.

ಹಳಿಯಾಳ: ಪಾಲಕರು ತಮ್ಮ ಮಕ್ಕಳಿಗಾಗಲಿ ಅಥವಾ ಯುವಪೀಳಿಗೆಗೆ ‘ಜೈ ಶ್ರೀರಾಮ್’ ಎಂಬ ಘೋಷಣೆ ಕಲಿಸುವ ಬದಲು, ರಾಮಾಯಣದ ಪರಿಚಯ ಮಾಡಿಸಿ ಶ್ರೀರಾಮನ ಆದರ್ಶಗಳನ್ನು ಕಡ್ಡಾಯವಾಗಿ ಕಲಿಸಬೇಕು ಎಂದು ಹಳಿಯಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸರಾಜ್ ಪ್ರಸನ್ನ ಕರೆ ನೀಡಿದರು.

ಸೋಮವಾರ ತಾಲೂಕಾಡಳಿತ ಸೌಧದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಳಿಯಾಳ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಎಲ್ಲ ಮಹರ್ಷಿ ವಾಲ್ಮೀಕಿ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಮಾಯಣವು ಕೇವಲ ಒಂದು ಕಥೆಯಲ್ಲ, ಅದು ನಮ್ಮ ಭಾರತೀಯ ಸಂಸ್ಕೃತಿಯ ಜೀವಂತ ಆದರ್ಶ. ರಾಮಾಯಣ ನಮಗೆ ಧರ್ಮ ಯಾವುದು, ಅಧರ್ಮ ಯಾವುದು ಎಂದು ತೋರಿಸುವ ದಾರಿದೀಪವಾಗಿದೆ. ವಾಲ್ಮೀಕಿ ಜಯಂತಿಯು ಕೇವಲ ಆಚರಣೆಗೆ ಸೀಮಿತವಾಗದೇ, ಸಮಾಜ ಪರಿವರ್ತನೆಯ ಸಂಕಲ್ಪವಾಗಿ ಆಚರಿಸಬೇಕು ಎಂದರು.ಬಿಇಒ ಪ್ರಮೋದ ಮಹಾಲೆ ಮಾತನಾಡಿ, ರಾಮಾಯಣದಲ್ಲಿ ಪಿತೃವಾಕ್ಯ ಪಾಲನೆ, ಸಹೋದರತ್ವ, ಪತಿವ್ರತಾ ಧರ್ಮ ಹಾಗೂ ನಿಸ್ವಾರ್ಥ ಸೇವೆಯ ಪ್ರತೀಕವಾದ ಹನುಮಂತ, ವಾಲಿ, ಸುಗ್ರೀವ, ರಾವಣ ಮೊದಲಾದ ಪಾತ್ರಗಳು ಇಂದಿಗೂ ನಮಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತವೆ ಎಂದರು.ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ನಾಯಕ್ ಬಾವಿಕೇರಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ಅನುಸರಿಸಿ ಶಿಕ್ಷಣ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿಸೆಯಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದರು.ಶಿಕ್ಷಣತಜ್ಞ ಕಾಳಿದಾಸ ಬಡಿಗೇರ ಅವರು ಮಹರ್ಷಿ ವಾಲ್ಮೀಕಿಯವರ ಜೀವನ, ಸಾಹಿತ್ಯ ಕೃಷಿ ಮತ್ತು ರಾಮಾಯಣದ ರಚನೆಯ ಕುರಿತು ಉಪನ್ಯಾಸ ನೀಡುತ್ತಾ ಆದಿಕವಿ ವಾಲ್ಮೀಕಿಯ ಮೂಲ ಹೆಸರು ರತ್ನಾಕರ. ನಾರದರ ಉಪದೇಶದಿಂದ ಬದುಕು ಬದಲಾಯಿಸಿ ‘ವಾಲ್ಮೀಕಿ’ ಆದ ಅವರು, ಬ್ರಹ್ಮನ ಪ್ರೇರಣೆಯಿಂದ 24 ಸಾವಿರ ಶ್ಲೋಕಗಳು, 7 ಕಾಂಡಗಳನ್ನು ಹೊಂದಿರುವ ರಾಮಾಯಣವನ್ನು ರಚಿಸಿದರು. ಸೀತಾಮಾತೆಗೆ ಆಶ್ರಯ ನೀಡಿ, ಲವ- ಕುಶರಿಗೆ ವಿದ್ಯೆ ಕಲಿಸಿದ ಮಹಾನ್ ಋಷಿಯಾಗಿ ಇಂದಿಗೂ ಪೂಜ್ಯರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮಾಜದ ಪ್ರಮುಖರಾದ ಮಹೇಶ ನಾಯಕ, ಜಯಾ ವಾಲ್ಮೀಕಿ, ಸಿಪಿಐ ಭೀಮಣ್ಣ ಸೂರಿ. ಗ್ರೇಡ್-2 ತಹಸೀಲ್ದಾರ್ ಹನುಮಂತ ಪರೋಡಕರ, ರೋಟರಿ ಕ್ಲಬ್ ಅಧ್ಯಕ್ಷ ಕಮಲ್ ಸಿಕ್ವೇರಾ, ಜೀಜಾಮಾತಾ ಮರಾಠಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ್, ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಜಿ.ಡಿ. ಗಂಗಾಧರ್, ಪತ್ರಕರ್ತರ ಸಂಘದ ಅಧ್ಯಕ್ಷ ಸಂತೋಷ ಹಬ್ಬು, ಸಾಹಿತಿ ಹಾಗೂ ಚಿಂತಕ ವಿಠ್ಠಲ ಕೊರ್ವೆಕರ, ನ್ಯಾಯವಾದಿಗಳಾದ ಮಂಜುನಾಥ ಮಾದರ, ಮೇಘರಾಜ ಮೇತ್ರಿ ಹಾಗೂ ಇತರರು ಇದ್ದರು. ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ ಸ್ವಾಗತಿಸಿದರು. ಶಿಕ್ಷಕ ಗಣಪತಿ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.ಸಾಧಕರಿಗೆ ಸನ್ಮಾನ: ಎಸ್ಎಸ್ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಾಲ್ಮೀಕಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಉತ್ತಮ ಪ್ರೇರಣಾದಾಯಕ ಉಪನ್ಯಾಸ ನೀಡಿದ ಕಾಳಿದಾಸ ಬಡಿಗೇರ ಅವರನ್ನು ತಾಲೂಕಾಡಳಿತದ ವತಿಯಿಂದ ಸನ್ಮಾನಿಸಲಾಯಿತು. ಸುನೀಲ ಯರಗಟ್ಟಿ ಕಲಾಶಾಲೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.

ಹೊಂಗಿರಣ ಕಲಾತಂಡದವರು ಅಂತಾರಾಷ್ಟ್ರೀಯ ಸೂತ್ರದ ಬೊಂಬೆಯಾಟ ಕಲಾವಿದೆ ಸುಜಾತಾ ಬಿರಾದಾರ್ ಅವರ ನಿರ್ದೇಶನದಲ್ಲಿ ರಾಮಾಯಣದ ‘ಸೀತಾಪಹರಣ’ ದೃಶ್ಯದ ಬೊಂಬೆಯಾಟ ಪ್ರದರ್ಶನ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರ ಸಭೆ ವಿಫಲ: ಪರಿಹಾರವಿಲ್ಲ
ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ₹215 ಕೋಟಿ ಅಭಿವೃದ್ಧಿ ಯೋಜನೆ!