ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಅನುಭವ ಮಂಟಪದಲ್ಲಿ ಮಹಾಂತ ಜೋಳಿಗೆಯ ಹರಿಕಾರರಾದ ಡಾ.ಮಹಾಂತ ಶ್ರೀಗಳ ೮ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ದುಶ್ಚಟಗಳ ಭಿಕ್ಷೆ ಬೇಡುವ ಹಾಗೂ ಬಸವ ತತ್ವ ಪಾಲಿಸುವ ಈ ನಾಡಿನ ಏಕೈಕ ಶ್ರೀಗಳೆಂದರೆ ಇಳಕಲ್ಲಿನ ಡಾ.ಮಹಾಂತ ಶ್ರೀಗಳು ಮಾತ್ರ. ಅಂತವರು ಬಾಳಿ ಬೆಳಗಿದ ಈ ನಾಡಿನಲ್ಲಿ ಇಂದು ಅವರ ಕೂಸಾದ ಡಾ.ಗುರುಮಹಾಂತ ಶ್ರೀಗಳು ಸಹ ದುಶ್ಚಟಗಳ ನಿವಾರಣೆಗೆ ಹಾಗೂ ಬಸವ ತತ್ವಗಳ ಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಅವರಿಗೆ ನಿಮ್ಮ ಬೆಂಬಲ ಬೇಕು. ನಿಮ್ಮ ಮನೆಯಲ್ಲಿರುವ ಮಕ್ಕಳಿಗೆ ಪ್ರತಿದಿನ ಲಿಂಗ ಪೂಜೆ, ವಚನ ಪಠಣ ಹಾಗೂ ಬಸವ ತತ್ವಗಳನ್ನು ಓದುವುದು, ಕಲಿಯುವುದು ಹಾಗೂ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದರೆ ಅದುವೇ ಶ್ರೀಗಳಿಗೆ ಕೊಡುವ ಗೌರವ ಎಂದು ತಿಳಿಸಿ, ತಮ್ಮ ಜೀವಿತದವರೆಗೂ ಈ ಮಠದ ಹಿತರಕ್ಷಣೆ ತಮ್ಮದು ಎಂದು ಹೇಳಿದರು.
ಸಮಾರಂಭ ಉದ್ದೇಶಿಸಿ ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಶ್ರೀಗಳು, ರಾಜ್ಯ ವಿರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ಬಾಗಲಕೊಟೆಯ ವೈದ್ಯರಾದ ಬಿ.ಎಚ್. ಕೆರೂಡಿ, ಧಾರವಾಡದ ಅನುಭಾವಿ ರಮೇಶ ತುಂಭರಗುದ್ದಿ ಇತರರು ಮಾತನಾಡಿ, ಮಹಾಂತ ಶ್ರೀಗಳು ತಮ್ಮ ಜೀವನವನ್ನು ಸಮಾಜ ಸೇವೆಗೆ ಸಮರ್ಪಿಸಿದರು. ದುಶ್ಚಟವನ್ನು ಜೋಳಿಗೆಯಲ್ಲಿ ಭಿಕ್ಷೆ ಬೇಡುವ ಮೂಲಕ ಯುವ ಸಮುದಾಯದ ಆರೋಗ್ಯಕ್ಕೆ ಮಾರಕವಾದ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ದುಶ್ಚಗಳ ನಿರ್ಮೂಲನೆಗೆ ಶ್ರಮಿಸಿದರು. ಅವರ ಹಾದಿಯಲ್ಲಿಯೇ ಇಂದಿನ ಡಾ.ಗುರುಸಿದ್ಧ ಶ್ರೀಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.ಸಮಾರಂಭದಲ್ಲಿ ಡಾ.ಗುರುಮಹಾಂತ ಶ್ರೀಗಳು, ಸಿದ್ದಯ್ಯನಕೋಠೆಯ ಶ್ರೀಗಳು, ದಂದಿಗುಂದದ ಶಿವಾನಂದ ಶ್ರೀಗಳು, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪೂರ, ಡಾ.ಕೇರೂಡಿ ದಂಪತಿ, ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಶಿವರುದ್ರಪ್ಪ ಗೊಂಗಡಶೆಟ್ಟಿ ಇತರರು ಉಪಸ್ಥಿತರಿದ್ದರು.