ಮುನಿರಾಬಾದ್: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಕಲಿಸಬೇಕು. ಆಗ ಮಾತ್ರ ಮಕ್ಕಳು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.ದಸರಾ ಮಹೋತ್ಸವದ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಇಂದಿನ ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಸಂತಸದ ಸಂಗತಿ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಪ್ಪಲ್ಲ. ಆದರೆ ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಸಂಸ್ಕೃತಿಯನ್ನೂ ಕಲಿಸುವುದು ಅಷ್ಟೇ ಮುಖ್ಯ ಎಂದರು.ಇತ್ತೀಚಿನ ದಿನಗಳಲ್ಲಿ ನೈತಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕುಸಿಯುತ್ತಿರುವುದು ಕಳವಳಕಾರಿ ಸಂಗತಿ. ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ವಿಚ್ಛೇದನ ಪಡೆಯುತ್ತಿರುವ ಬೆಳವಣಿಗೆ ಕುಟುಂಬ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ತೋರಿಸುತ್ತದೆ. ಹಿಂದೆ ದಂಪತಿ ವಿವಾಹದ ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದರು. ಆದರೆ ಇಂದು ಕೆಲವೇ ದಿನಗಳಲ್ಲಿ ವೈವಾಹಿಕ ಸಂಬಂಧಗಳು ಮುರಿದುಬೀಳುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಸ್ವಧರ್ಮ ಪಾಲನೆಯ ಮಹತ್ವವನ್ನು ಸಾರಿದ್ದಾನೆ. ಆದರೆ ಇಂದಿನ ಯುವಜನರು ತಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಅರಿಯದೆ ಪಾಶ್ಚಾತ್ಯ ಪದ್ಧತಿಗಳನ್ನು ಅನುಕರಿಸುತ್ತಿರುವುದರಿಂದ ನೈತಿಕ ಮೌಲ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.ನವರಾತ್ರಿಯ ಶುಭ ಸಂದರ್ಭದಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸುವ ಸಂಕಲ್ಪ ಮಾಡಬೇಕು. ಗಿಡಮರಗಳಿಗೆ ಬೇರು ಎಷ್ಟು ಮುಖ್ಯವೋ, ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಸಂಸ್ಕಾರವೂ ಅಷ್ಟೇ ಮುಖ್ಯ. ಬೇರು ಗಟ್ಟಿಯಾಗಿದ್ದರೆ ಮರ ಸದೃಢವಾಗಿ ಬೆಳೆಯುತ್ತದೆ. ಅದೇ ರೀತಿ ಮಕ್ಕಳಲ್ಲಿ ಸಂಸ್ಕಾರ ಗಟ್ಟಿಯಾಗಿದ್ದರೆ ದೇಶದ ಸಂಸ್ಕೃತಿ ಮತ್ತು ಪರಂಪರೆಯೂ ಉಳಿಯುತ್ತದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದರು.ನಾನು ಸಾಫ್ಟ್‌ವೇರ್ ಎಂಜಿನಿಯರಿಂಗ್ ಓದಿದ್ದು, ವೃತ್ತಿಯಿಂದ ಎಂಜಿನಿಯರ್ ಆಗಿದ್ದೇನೆ. ಆದರೆ ಪ್ರವೃತ್ತಿಯಿಂದ ರೈತ ಮಹಿಳೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರತಿನಿತ್ಯ ಹಸುಗಳ ಹಾಲು ಕರೆಯುವುದು, ಕುರಿಗಳನ್ನು ಮೇಯಿಸುವುದು, ಕೋಳಿಗಳಿಗೆ ಕಾಳು ಹಾಕುವುದು ಹಾಗೂ ಹೊಲದಲ್ಲಿ ಕೆಲಸ ಮಾಡುತ್ತೇನೆ. ಇದಕ್ಕೆ ಮುಖ್ಯ ಕಾರಣ ನನ್ನ ತಂದೆ-ತಾಯಿ ನನಗೆ ಕಲಿಸಿದ ಸಂಸ್ಕಾರ ಮತ್ತು ಸಂಸ್ಕೃತಿ ಎಂದು ಕವಿತಾ ಮಿಶ್ರಾ ತಿಳಿಸಿದರು.ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್, ಸಹಾಯಕ ಕಾರ್ಯದರ್ಶಿ ಬಸವರಾಜ ಜಿರಾಳ, ಪ್ರಾಧಿಕಾರದ ಸದಸ್ಯರಾದ ಈರಣ್ಣ, ಶರಣಗೌಡ ಪಾಟೀಲ, ವೆಂಕಟೇಶ, ಪಾಲಾಕ್ಷಪ್ಪ ಗುಂಗಾಡಿ ಹಾಗೂ ಮಾಜಿ ಅಧ್ಯಕ್ಷ ವೀರೇಶ ಉಪಸ್ಥಿತರಿದ್ದರು.