ಮಕ್ಕಳಿಗೆ ಉತ್ತಮವಾಗಿ ಪಾಠ ಮಾಡಿ

KannadaprabhaNewsNetwork | Published : May 9, 2025 12:37 AM
Follow Us

ಸಾರಾಂಶ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗಶಿಕ್ಷಕರು ಉಡಾಫೆ ಉತ್ತರ ಕೊಡುವುದು ಬಿಟ್ಟು, ಮಕ್ಕಳಿಗೆ ಉತ್ತಮವಾಗಿ ಪಾಠ ಹೇಳಿಕೊಡಿ. ನಿಮ್ಮ ಉಡಾಫೆ ಮನಸ್ಥಿತಿಯಿಂದಲೇ ಫಲಿತಾಂಶ ಕಳಪೆಯಾಗಿದೆ ಎಂದು ಶಿಕ್ಷಕರನ್ನು ಶಾಸಕ ಬಿ.ಜಿ.ಗೋವಿಂದಪ್ಪ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

2025ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊಸದುರ್ಗ ತಾಲೂಕಿನ ಸರ್ಕಾರಿ, ಅನುದಾನಿತ ಮತ್ತು ವಸತಿ ಶಾಲೆಗಳಲ್ಲಿ ಕಳಪೆಯಾಗಿದೆ. ಆದರೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಒಳ್ಳೆಯ ಫಲಿತಾಂಶ ಬಂದಿದೆ. ಸರ್ಕಾರಿ, ಅನುದಾನಿತ ಮತ್ತು ವಸತಿ ಶಾಲೆಯ ಶಿಕ್ಷಕರಾಗಿರುವ ನೀವುಗಳು ಸರ್ಕಾರದಿಂದ ಸಂಬಳ ತೆಗೆದುಕೊಳ್ಳುವುದಿಲ್ಲವೇ? ಖಾಸಗಿ ಶಾಲೆಗಳಿಗಿಂತ ಫಲಿತಾಂಶ ಕಡಿಮೆ ಬಂದಿರುವುದೇಕೆ? ಎಂದು ಪ್ರಶ್ನಿಸಿದರು.

ಗ್ರಾಮೀಣ ಮತ್ತು ಬಡ ಕುಟುಂಬದ ಮಕ್ಕಳು ಶಿಕ್ಷಣ ಪಡೆದು ದೇಶದ ಆಸ್ತಿಯಾಗಬೇಕೆಂದು ಸರ್ಕಾರ ಶಿಕ್ಷಣಕ್ಕಾಗಿ ನೂರಾರು ಕೋಟಿ ರು. ಹಣ ಖರ್ಚು ಮಾಡುತ್ತಿದೆ. ತಿಂಗಳ ಸಮಯಕ್ಕೆ ಸರಿಯಾಗಿ ಸಂಬಳವನ್ನು ಕೊಡುತ್ತಿದೆ. ಸರ್ಕಾರಿ ಶಾಲೆಗಳ ಪ್ರಗತಿಗೆ ಎಷ್ಟೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಿದರು ಕೂಡ ಫಲಿತಾಂಶ ಕಳಪೆಯಾಗುತ್ತಿರುವುದೇಕೆ? ವಸತಿ ಶಾಲೆಗಳಲ್ಲಿ ಎಲ್ಲಾ ಸೌಕರ್ಯಗಳಿದ್ದರೂ ಫಲಿತಾಂಶ ಶೂನ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಾದರೂ ನಿರ್ಲಕ್ಷ್ಯ ಬಿಟ್ಟು ಸರ್ಕಾರದ ಆದೇಶಗಳನ್ನ ಪಾಲನೆ ಮಾಡಿ, ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ನೀಡಿ. ಮಕ್ಕಳು ಮತ್ತು ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡದಂತೆ, ಸರ್ಕಾರಿ ಶಾಲೆಗಳಿಗೆ ಬರುವ ವಾತಾವರಣ ನಿರ್ಮಿಸಿ. ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಾಲೆಗಳ ಮುಖ್ಯೋಪಾಧ್ಯಾಯರು ಕೂಡಲೇ ಪ್ರತಿ ಶಾಲೆಯಲ್ಲಿಯೂ ಪೋಷಕರ ಸಭೆ ಕರೆದು, ತಮ್ಮ ಮಕ್ಕಳ ಓದು ಮತ್ತು ಫಲಿತಾಂಶದ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಯಾವ ರೀತಿಯಾಗಿ ಸಹಕಾರ ನೀಡಬೇಕೆಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಮುಖ್ಯ ಭಾಗವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್, ಯುವಜನ ಕ್ರೀಡಾಧಿಕಾರಿ ಮಹಾಂತೇಶ್, ಇಸಿಒ ಶಶಿಧರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಪಾಷಾ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗುರುಮೂರ್ತಿ, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ನಾಗೇಂದ್ರಪ್ಪ, ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಕೆಂಚಪ್ಪ, ಕರ್ನಾಟಕ ರಾಜ್ಯ ನೌಕರರ ಸಂಘದ ಕಾರ್ಯದರ್ಶಿ ದಿವಾಕರ್, ಹೊಸದುರ್ಗ ತಾಲೂಕು ನೌಕರರ ಸಂಘದ ಮಾಜಿ ಅಧ್ಯಕ್ಷ ಶಾಂತಪ್ಪ, ಮುಖಂಡರಾದ ಆಗ್ರೋ ಶಿವಣ್ಣ, ದೀಪಿಕಾ ಸತೀಶ್ ಮತ್ತು ಮಹಮದ್ ಇಸ್ಮಾಯಿಲ್ ಸೇರಿದಂತೆ ಶಿಕ್ಷಕರು ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.