ಪೊಲೀಸರು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ ಎಂದು ಶಾಸಕರು ಮನಸೋಇಚ್ಛೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರೇ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದರು.
ರಾಮನಗರ : ಹರೀಸಂದ್ರ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿಯವರು ಕೈಜೋಡಿಸುತ್ತಾರೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವರೆಗೆ ವಿರಮಿಸುವುದಿಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಹರೀಸಂದ್ರ ಗ್ರಾಮದ ಸರ್ವೇ ನಂಬರ್ 166ರಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಸ್ಥಳದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಘಟಕ ನಿರ್ಮಾಣ ಸ್ಥಗಿತಗೊಳಿಸಲು ಗ್ರಾಮಸ್ಥರೊಂದಿಗೆ ಧರಣಿ ನಡೆಸುವುದು ಮಾತ್ರವಲ್ಲದೆ ಕಾನೂನು ಹೋರಾಟವನ್ನೂ ನಡೆಸಲಾಗುವುದು ಎಂದರು.
ಇಲ್ಲಿ ಘಟಕ ನಿರ್ಮಾಣಕ್ಕೂ ಮುನ್ನ ಜಿಲ್ಲಾಡಳಿತ ಸುತ್ತಮುತ್ತಲ ಗ್ರಾಮಗಳ ರೈತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿಲ್ಲ. ಅಧಿಕಾರ ದುರ್ಬಳಕೆ ಮಾಡಿಕೊಂಡು ಘಟಕ ನಿರ್ಮಾಣ ಮಾಡಲಾಗುತ್ತಿದೆ.
ಪ್ರಜ್ಞಾವಂತರಾಗಿರುವ ಜಿಲ್ಲಾಧಿಕಾರಿಗಳು ಸಮಾಜ ಕಟ್ಟುವ ಕೆಲಸಕ್ಕೆ ಅಧಿಕಾರ ಬಳಸಬೇಕು. ಅದನ್ನು ಬಿಟ್ಟು ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಪೊಲೀಸ್ ಬಲ ಬಳಸಿಕೊಂಡು ರೈತರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಾತ ಮುತ್ತಾತನ ಕಾಲದಿಂದಲೂ ಇಲ್ಲಿನ ರೈತರು ರೇಷ್ಮೆ, ಮಾವು , ತೆಂಗು ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರ್ವೇ ನಂಬರ್ 166ರಲ್ಲಿ ಸರ್ಕಾರಿ ಗೋಮಾಳದಲ್ಲಿ ಸಾಗುವಳಿಗಾಗಿ ರೈತರು ಹಾಕಿದ್ದ ಅರ್ಜಿಗಳನ್ನು ವಜಾ ಮಾಡಲಾಗಿದೆ. ಸನಿಹದಲ್ಲಿಯೇ ರಾಮದೇವರ ಬೆಟ್ಟ ಹಾಗೂ ಪಕ್ಕದಲ್ಲಿ ಅರ್ಕಾವತಿ ನದಿ ಹರಿಯುತ್ತಿದೆ. ಇಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡಲು ಅವಕಾಶ ಇಲ್ಲ. ಸುತ್ತಮುತ್ತಲು 8 ಕಿಮೀವರೆಗೆ ಗ್ರಾಮಗಳಿಲ್ಲ ಅಂತ ಸುಳ್ಳು ವರದಿ ನೀಡಿದ್ದಾರೆ ಎಂದು ಆರೋಪಿಸಿದರು.
ಘಟಕ ನಿರ್ಮಾಣದಿಂದ ಗ್ರಾಮಸ್ಥರು, ಪಶು ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಾಂಕ್ರಾಮಿಕ ರೋಗಗಳು ಹರಡಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಪರಿಸರ, ಕೃಷಿ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅರ್ಕಾವತಿ ನದಿ ನೀರು ಕಲುಷಿತಗೊಳ್ಳುತ್ತದೆ. ಹಾಗಾಗಿ ರೈತರ ಹೋರಾಟದ ಜೊತೆಗೆ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಿ ಘಟಕ ನಿರ್ಮಾಣ ಕೆಲಸವನ್ನು ಸ್ಥಗಿತಗೊಳಿಸುವ ಕೆಲಸ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ದೊಡ್ಡಾಲಹಳ್ಳಿಯಲ್ಲಿ ಕಸ ಹಾಕಿಸಿಕೊಳ್ಳಲಿ :
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕಸ ವಿಲೇವಾರಿ ಘಟಕದ ಸುತ್ತ 8 ಕಿ.ಮೀ ವರೆಗೆ ಯಾವುದೇ ಊರುಗಳಿಲ್ಲ ಎಂದು ತಹಸೀಲ್ದಾರ್ ಸುಳ್ಳು ವರದಿ ನೀಡಿದ್ದಾರೆ. ಇದರ ಆಧಾರದಲ್ಲಿ ಭೂಮಿಯನ್ನು ರೈತರಿಂದ ಬಲವಂತವಾಗಿ ಕಸಿದುಕೊಂಡು ಕಸ ಹಾಕಲು ಬಂದಿದ್ದಾರೆ. ಯಾವ ಕಂಪನಿಯಿಂದ ಎಷ್ಟು ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಶಾಸಕರನ್ನು ಪ್ರಶ್ನಿಸಿದರು.
ಭೂ ಸುಧಾರಣೆ ಕಾಯ್ದೆಯ ಪ್ರಕಾರ ನಮೂನೆ 50,53, 57 ಅರ್ಜಿಗಳು ವಿಲೇವಾರಿ ಆಗುವವರೆಗೆ ರೈತರನ್ನು ಒಕ್ಕಲೆಬ್ಬಿಸುವಂತಿಲ್ಲ. ಹೀಗಿದ್ದರೂ ಅಧಿಕಾರ ಇದೆ. ಪೊಲೀಸರು, ಅಧಿಕಾರಿಗಳು ನಮ್ಮ ಮಾತು ಕೇಳುತ್ತಾರೆ ಎಂದು ಶಾಸಕರು ಮನಸೋಇಚ್ಛೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರೇ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.
ರೈತರ ಮಕ್ಕಳು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಮಹಾ ನಾಯಕರು, ಅನ್ನದಾತರಿಗೆ ದ್ರೋಹ ಮಾಡುತ್ತಿದ್ದಾರೆ. ನಿಮ್ಮ ಆಸ್ತಿಗಳಲ್ಲಿ ಬೇರೆ ಊರಿನ ಕಸ ಹಾಕಿಸಿಕೊಳ್ಳಿ ನೋಡೋಣ, ದೊಡ್ಡಾಲಹಳ್ಳಿಯಲ್ಲಿ ಕಸ ಹಾಕಿಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದರು.
ಮಹಿಳೆಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದು ಹೆದರಿಸುತ್ತೀರಾ. ಇದ್ಯಾವ ರಾಜಕೀಯ. ಯಾರಿಗೂ ಅಧಿಕಾರ ಶಾಶ್ವತ ಅಲ್ಲ, ಕಾಲಚಕ್ರ ಬದಲಾಗುತ್ತದೆ. ಅಧಿಕಾರಿಗಳು ಏನೇನು ಮಾಡುತ್ತಿದ್ದಾರೆ ಎಂಬು ಇಂಚಿಂಚು ಮಾಹಿತಿ ನಮ್ಮ ಬಳಿ ಇದೆ. ಮುಂದೆ ತಪ್ಪು ಮಾಡುವ ಅಧಿಕಾರಿಗಳು ಸಮಸ್ಯೆಗೆ ಸಿಲುಕಿಕೊಳ್ಳುವುದು ನಿಶ್ಚಿತ ಎಂದು ಎ.ಮಂಜುನಾಥ್ ಎಚ್ಚರಿಕೆ ನೀಡಿದರು.