ಕನ್ನಡಪ್ರಭ ವಾರ್ತೆ ಉಳ್ಳಾಲದೇರಳಕಟ್ಟೆಯ ಯೇನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಝುಲೇಖಾ ಯೆನೆಪೋಯ ಗ್ರಂಥಿ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ 7 ವರ್ಷದ ಬಾಲಕಿ ಥೈರಾಯ್ಡ್ ಕ್ಯಾನ್ಸರ್ ನಿವಾರಣೆಗೆ ಸುಪ್ರಮೇಜರ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಅತ್ಯಂತ ಸೂಕ್ಷ್ಮತೆಯಿಂದ ಕೂಡಿದ್ದ ಈ ಶಸ್ತ್ರಚಿಕಿತ್ಸೆಯಲ್ಲಿ ಹೊಸ ತಂತ್ರಜ್ಞಾನ ಉಪಯೋಗಿಸಿ ವೈದ್ಯರ ತಂಡ ಯಶಸ್ವಿಗೊಂಡಿದ್ದು, ಬಾಲಕಿಯೂ ಗುಣಮುಖಳಾಗಿದ್ದಾಳೆ ಎಂದು ಝುಲೇಖಾ ಯೇನೆಪೊಯ ಆಂಕೋಲಜಿ ವಿಭಾಗದ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 30 ವರ್ಷಗಳ ವೈದ್ಯಕೀಯ ವೃತ್ತಿಯಲ್ಲಿ ಮೊದಲ ಬಾರಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪೋಷಕರು ಮಗುವಿನ ಕುತ್ತಿಗೆಯ ಊತ ಗಮನಿಸಿ ಆಸ್ಪತ್ರೆಗೆ ಕರೆತಂದಿದ್ದರು. ಸರಣಿ ಪರೀಕ್ಷೆಗಳ ನಂತರ ಥೈರಾಯ್ಡ್ ಗ್ರಂಥಿಯ ವ್ಯಾಪಿಲ್ಲರಿ ಕಾರ್ಸಿನೋಮ ಇರುವುದು ದೃಢವಾಗಿದ್ದು ಕುತ್ತಿಗೆಯ ಮಧ್ಯ ಹಾಗೂ ಎರಡೂ ಭಾಗಕ್ಕೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಅರ್ಬುದ ಶಸ್ತ್ರಚಿಕಿತ್ಸಾ ತಂಡದಲ್ಲಿರುವ ಡಾ.ಎಚ್.ಟಿ.ಅಮರ್ ರಾವ್, ಡಾ.ನೂರ್‌ಮೊಹಮ್ಮದ್, ಅರಿವಳಿಕೆ ತಜ್ಞೆ ಡಾ.ಪ್ರೀತಿ ಇವರ ಜೊತೆಗೂಡಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆವು ಎಂದರು.ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ ಯಂತ್ರ ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಪ್ರಸ್ತುತ ಮಗು ಶೇ.99 ಗುಣಮುಖವಾಗಿದ್ದು, ರೇಡಿಯೋ ಅಯೋಡಿನ್ ಎನ್ನುವ ಇನ್ನೊಂದು ಚಿಕಿತ್ಸೆ ಬಳಿಕ ಸಂಪೂರ್ಣ ಗುಣವಾಗಿರುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿಸಿದರು.
ಡಾ.ನೂರ್‌ಮಹಮ್ಮದ್ ಮಾತನಾಡಿ, ಶಸ್ತ್ರಚಿಕಿತ್ಸೆಗೆ ಒಂಭತ್ತು ಗಂಟೆ ಹಿಡಿದಿದೆ. ಶಸ್ತ್ರಚಿಕಿತ್ಸೆ ನಡೆಸಿದ ಮರುದಿನವೇ ಮಗು ಆರಾಮವಾಗಿತ್ತು ಎಂದರು.ಆಸ್ಪತ್ರೆಯ ಅಧೀಕ್ಷಕ ಹಬೀಬ್ ರಹಮಾನ್, ಡಾ.ಎಚ್.ಟಿ.ಅಮರ್ ರಾವ್, ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್, ಮಕ್ಕಳ ವಿಭಾಗದ ಡಾ.ಅನಿತಾ ಪ್ರಭು, ಶುಶ್ರೂಷ ವಿಭಾಗದ ಅಧೀಕ್ಷಕಿ ಸತ್ಯವತಿ ದೇವಿ, ಸಹಾಯಕ ವೈದ್ಯಕೀಯ ನಿರ್ದೇಶಕ ಡಾ.ಬೋನಿ ಪೌಲ್, ಮೊಹಮ್ಮದ್ ಸಾಬಿತ್ ಇದ್ದರು.
..........ಆಯುಷ್ಮಾನ್ ಜಾರಿ ಪರಿಷ್ಕರಣೆ ಅಗತ್ಯಆಯುಷ್ಮಾನ್ ಯೋಜನೆ ಜ್ಯಾರಿಯಲ್ಲಿದ್ದರೂ ಆಯಾಯ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ ಸೂಚನಾ ಪತ್ರ ತಾರದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಂತಿಲ್ಲ. ಇದರಿಂದ ಯೆನೆಪೋಯ ಆಸ್ಪತ್ರೆಗೆ ದೂರದ ಜಿಲ್ಲೆಗಳಿಂದ ಬರುವ ಮಂದಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆಯುಷ್ಮಾನ್ ಫಲಾನುಭವಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಯಲು ಸರಳೀಕೃತ ನೀತಿ ಜಾರಿಗೊಳಿಸಬೇಕಿದೆ ಎಂದು ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಆಗ್ರಹಿಸಿದ್ದಾರೆ.
................