- ಹರಿಹರದಲ್ಲಿ ನಿತ್ಯ ಸ್ತೋತ್ರಗಳು ಕಿರುಪುಸ್ತಕ ಬಿಡುಗಡೆ
ಹರಿಹರ: ಮಕ್ಕಳಿಗೆ ಲೌಕಿಕ ವ್ಯವಹಾರಕ್ಕಿಂತ ಭೌತಿಕ ಧರ್ಮಾಚರಣೆ ಕಲಿಸುವ ಅವಶ್ಯಕತೆಯಿದೆ ಎಂದು ಅಧ್ಯಾತ್ಮಿಕ ಚಿಂತಕಿ ಹಾಗೂ ನಿವೃತ್ತ ಶಿಕ್ಷಕಿ ನಾಗಮಣಿ ಶಾಸ್ತ್ರಿ ಅಭಿಪ್ರಾಯಪಟ್ಟರು.
ನಗರದ ವಿಠ್ಠಲ ಮಂದಿರದಲ್ಲಿ ಭಾನುವಾರ ಸಂಜೆ ಸನಾತನ ಸಿಂದೂ ಬಳಗದಿಂದ ಹಮ್ಮಿಕೊಂಡಿದ್ದ ನಿತ್ಯ ಸ್ತೋತ್ರಗಳು ಕಿರುಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ತಾಯಂದಿರು ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚರಣೆ ಹಾಗೂ ಪರಂಪರೆ ಬಗ್ಗೆ ಹೇಳಿಕೊಡಬೇಕು. ಇಂದು ಬಿಡುಗಡೆಯಾದ ಕೃತಿಯಲ್ಲಿರುವ ಸ್ತೋತ್ರಗಳನ್ನು ನಿತ್ಯ ಮನೆಯಲ್ಲಿ ಮಕ್ಕಳಿಂದ ಪಠಣ ಮಾಡಿಸಬೇಕು. ಇಂದು ಬಿತ್ತಿದ ಬೀಜ ಮುಂದೊಂದು ದಿನ ಹೆಮ್ಮರವಾಗಿ ಎಲ್ಲರಿಗೂ ನೆರಳು ನೀಡುತ್ತದೆ ಎಂದರು.ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಪೈಪೋಟಿ ಹಾಗೂ ಸ್ಪರ್ಧಾತ್ಮಕ ಯುಗದ ಇಂದಿನ ಕಾಲಘಟ್ಟದಲ್ಲಿ ಸನಾತನ ಸಿಂದೂ ಬಳಗ ಭವಿಷ್ಯ ಮಕ್ಕಳ ದೃಷ್ಟಿಯಿಂದ ಸಂಸ್ಕೃತಿ ಪಾಠದ ಪ್ರಯತ್ನ ಉತ್ತಮ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ದೇಶಾಭಿಮಾನ ಮೂಡಿಸುವಂತಹ ಹೆಚ್ಚೆಚ್ಚು ಕಾರ್ಯಕ್ರಮಗಳು ಈ ಬಳಗದಿಂದ ಆಯೋಜಿಸುವಂತಾಗಲಿ ಎಂದು ಹಾರೈಸಿದರು.
ಸಂಸ್ಕೃತಿ ಹಾಗೂ ಸಂಸ್ಕಾರ ಸೇರಿ ಸುಸಂಸ್ಕೃತ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಇಂದು ನಾವು ಇವೆರಡನ್ನು ಬಿಟ್ಟು ಜೀವನ ಮಾಡುತ್ತಿದ್ದೇವೆ. ಇದನ್ನು ಅರಿತ ನಮ್ಮ ಸನಾತನ ಸಿಂದೂ ಬಳಗ ನಿತ್ಯ ಸ್ತೋತ್ರ ಎನ್ನುವ ಕಿರುಪುಸ್ತಕ ಬಿಡುಗಡೆ ಮಾಡುವಂತಹ ಸಣ್ಣ ಪ್ರಯತ್ನ ಮಾಡಿದೆ. ಇದು ಭವಿಷ್ಯದಲ್ಲಿ ದೊಡ್ಡ ವ್ಯತ್ಯಾಸ ಮೂಡಿಸುವ ವಿಶ್ವಾಸವಿದೆ ಎಂದರು.
- - -
ನಿತ್ಯ ಸ್ತೋತ್ರಗಳು ಕಿರುಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು. ನಾಗಮಣಿ ಶಾಸ್ತ್ರಿ, ಎಂ.ಆರ್. ಸತ್ಯನಾರಯಣ ರಾವ್, ಡಾ. ಆರ್. ಆರ್. ಖಮಿತ್ಕರ್ ಇನ್ನಿತರರು ಇದ್ದರು.