ಶಿಕ್ಷಣದೊಂದಿಗೆ ಸಂಸ್ಕಾರ, ಮೌಲ್ಯ ಕಲಿಸಿ: ಮಲ್ಲಿಕಾರ್ಜುನ ಶ್ರೀ

KannadaprabhaNewsNetwork | Published : Apr 13, 2024 1:01 AM

ಸಾರಾಂಶ

ಕ್ರಿಶ್ಚಿಯನ್ನರ ನಂತರ ದೇಶದಲ್ಲಿ ಸಮರ್ಥ ಹಾಗೂ ಸಂಸ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಮಠ ಮಾನ್ಯಗಳು.

ಕೊಟ್ಟೂರು: ಇಂದಿನ ದಿನಗಳಲ್ಲಿ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿಸುವುದು ಶಿಕ್ಷಕರ ದೊಡ್ಡ ಜವಾಬ್ದಾರಿಯಾಗಿದೆ ಎಂದು ಶಿವಮೊಗ್ಗ ಆನಂದಪುರ ಬೆಕ್ಕಿನ ಕಲ್ಮಠದ ಮಹಾರಾಜ ನಿರಂಜನ ಜಗದ್ಗುರು ಮಲ್ಲಿಕಾರ್ಜುನ ಶ್ರೀ ಹೇಳಿದರು.

ಪಟ್ಟಣದ ಮಹದೇವ ಇಂಟರ್ ನ್ಯಾಷನಲ್ ಶಾಲೆ ಮತ್ತು ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನಲ್ಲಿ ನಡೆದ ವಿಘ್ನೇಶ್ವರ, ಸರಸ್ವತಿ ವಿಗ್ರಹಗಳ ಪ್ರತಿಷ್ಠಾಪನೆ ಮತ್ತು ವೈಭವ ಲಕ್ಷ್ಮೀ ಪೂಜಾ ಮತ್ತು ಶಾಲೆಯ ಈಜುಕೊಳ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಶುಕ್ರವಾರ ಮಾತನಾಡಿದರು.

ಕ್ರಿಶ್ಚಿಯನ್ನರ ನಂತರ ದೇಶದಲ್ಲಿ ಸಮರ್ಥ ಹಾಗೂ ಸಂಸ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಮಠ ಮಾನ್ಯಗಳು. ವರ್ಷದಿಂದ ವರ್ಷಕ್ಕೆ ಅದರ ಕಾರ್ಯಕ್ಷೇತ್ರ ವಿಸ್ತಾರವಾಗುತ್ತಾ ಹೋದಂತೆ ಶಿಕ್ಷಣದಲ್ಲಿ ದೊಡ್ಡ ಕ್ರಾಂತಿಯೇ ಆಯಿತು. ಇಂದಿಗೂ ನಾಡಿನ ಪ್ರತಿಯೊಂದು ಸಮುದಾಯದ ಮಠಗಳು ಶಿಕ್ಷಣ ಸಂಸ್ಥೆ ಪ್ರಾರಂಭಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿವೆ. ಆದರೆ ಇತ್ತೀಚೆಗೆ ಶಿಕ್ಷಣವೆಂದರೆ ಬರೀ ಪಠ್ಯದ ಬದನೆಕಾಯಿ ಎಂಬಂತಾಗಿರುವುದರಿಂದ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಬುದ್ಧಿವಂತರ ಸಂಖ್ಯೆ ಕಡಿಮೆಯಾಗಿ ತಂದೆ ತಾಯಿಗಳನ್ನು ಕಾಣುವ ಪರಿಯೇ ಬೇರೆಯಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪಾಠ ಹೇಳುವ ಜವಾಬ್ದಾರಿಯೊಂದಿಗೆ ಶಿಕ್ಷಕರು, ಶಿಕ್ಷಣದ ಜೊತೆಯಲ್ಲಿಯೇ ಮಕ್ಕಳಿಗೆ ಸಂಸ್ಕಾರ, ನೀತಿ, ತಂದೆ ತಾಯಿಗೆ ನೋಡಿಕೊಳ್ಳುವ ಗುಣಗಳನ್ನು ಹೇಳಿಕೊಡಬೇಕು. ಅಲ್ಲೀಪುರದ ಮಹಾದೇವ ತಾತನವರ ಆರ್ಶೀವಾದ ಫಲದಿಂದ ಬೆಳೆದಿರುವ ಶ್ರೀ ಮಹಾದೇವ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಸಂಸ್ಕಾರವನ್ನು ತಿಳಿಸಿಕೊಡುತ್ತಿರುವುದು ಶ್ಲಾಘನೀಯ ಎಂದರು.

ಟ್ರಸ್ಟ್‌ನ ಆಡಳಿತಾಧಿಕಾರಿ ಬಸಾಪುರ ಪಂಪಾಪತಿ ಪ್ರಾಸ್ತಾವಿಕ ಮಾತನಾಡಿ, ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಉದ್ದೇಶದೊಂದಿಗೆ ಮಹಾದೇವ ತಾತನವರ ಆರ್ಶೀವಾದದಿಂದ ಕಟ್ಟಿದ ಶಿಕ್ಷಣ ಸಂಸ್ಥೆ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆ ಆರಂಭಿಸಿದ ವರ್ಷಗಳಲ್ಲಿ ಅನೇಕ ಅವಮಾನ, ಅಪಮಾನಗಳನ್ನು ಅನುಭವಿಸಿದ್ದೆ. ಇದೇ ಕಾರಣಕ್ಕಾಗಿ ಇಂದು ಉತ್ತಮ ಸಂಸ್ಥೆ ರೂಪುಗೊಳ್ಳಲು ಕಾರಣವಾಯಿತು ಎಂದು ಹೇಳಿದರು.

ಹಂಪಸಾಗರದ ಶ್ರೀ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯರು, ಹೂ.ಹಡಗಲಿ ಗವಿಮಠದ ಶ್ರೀ ಡಾ.ಹಿರಿಶಾಂತವೀರ ಸ್ವಾಮಿಗಳು ಮಾತನಾಡಿದರು. ಶಿವಮೊಗ್ಗದ ನಿವೃತ್ತ ಉಪನ್ಯಾಸಕಿ ಕಿರಣ್‌ರವೀಂದ್ರ ದೇಸಾಯಿ ಉಪನ್ಯಾಸ ನೀಡಿದರು.

ಮರಿಯಮ್ಮನಹಳ್ಳಿ ಗುರಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಕೊಟ್ಟೂರು ಮಠದ ಹಿರಿಯ ಕ್ರಿಯಾಮೂರ್ತಿ ಶಂಕರಸ್ವಾಮಿ ಉದ್ಘಾಟಿಸಿದರು. ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು, ಕೊಟ್ಟೂರು ಕಿರಿಯ ಕ್ರಿಯಾಮೂರ್ತಿ ಶಿವಪ್ರಕಾಶ ಕೊಟ್ಟೂರು ದೇವರು, ವರ್ತಕ ಆನಂದ, ಲೋಕನಗೌಡ, ಗಂಗಾಧರಪ್ಪ, ಟ್ರಸ್ಟ್ ಕಾರ್ಯದರ್ಶಿ ಬಿ.ಸರೋಜ ಇತರರು ಇದ್ದರು. ಬಿ.ಅರವಿಂದ, ಶಾಂತ ಆನಂದ ನಿರ್ವಹಿಸಿದರು.

Share this article