ಲಕ್ಷ್ಮೇಶ್ವರ: ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಏ. ೧೪ರಂದು ಗದಗ ನಗರದಲ್ಲಿ ಬೈಕ್ ರ‍್ಯಾಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ರಂಭಾಪುರಿ ಸಮುದಾಯ ಭವನದಲ್ಲಿ ಕಾರ್ಯಕರ್ತರ ಪೂರ್ವಭಾವಿ ಸಭೆ ಜರುಗಿತು.
ಭರತ್ ಬೊಮ್ಮಾಯಿ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದ್ದರೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜ ಬೊಮಾಯಿ ಪರ ದೊಡ್ಡ ಅಲೆ ಇದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಇದ್ದಾಗ ರೈತರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದರು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ಬಂದ್ ಮಾಡಿದೆ. ಇದೇ ರೀತಿ ಬಡ ಮಕ್ಕಳಿಗಾಗಿ ಮೀಸಲಿದ್ದ ಸ್ಕಾಲರ್‌ಶಿಪ್‌ಗಳ ಹಣವನ್ನೂ ಸಹ ಕಡಿಮೆಗೊಳಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಹಿಂದುಳಿದಿದೆ. ಇಲ್ಲಿ ಶಾಶ್ವತವಾದ ನೀರಾವರಿ ಸೌಲಭ್ಯದ ಅವಶ್ಯಕತೆ ಇದೆ. ಅದರೊಂದಿಗೆ ದೊಡ್ಡ ದೊಡ್ಡ ಇಂಡಸ್ಟ್ರೀ ತೆರೆದು ಆ ಮೂಲಕ ಉದ್ಯೋಗ ಸೃಷ್ಟಿಸುವ ಅಗತ್ಯ ಇದೆ. ಬಸವರಾಜ ಬೊಮ್ಮಾಯಿ ಜಯ ಗಳಿಸಿದರೆ ಈ ಎಲ್ಲ ಕೆಲಸಗಳನ್ನು ಮಾಡಲು ಅನುಕೂಲ ಆಗುತ್ತದೆ. ಕಾರಣ ಮತದಾರರು ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದರು.ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ ಬಾಳಿಕಾಯಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಲದ ಬಿಜೆಪಿ ಅಧ್ಯಕ್ಷ ಸುನಿಲ ಮಹಾಂತಶೆಟ್ಟರ, ನಿಂಗಪ್ಪ ಬನ್ನಿ, ಶಕ್ತಿ ಕತ್ತಿ, ನವೀನ ಬೆಳ್ಳಟ್ಟಿ, ಜಾನು ಲಮಾಣಿ, ಬಸವರಾಜ ಚಕ್ರಸಾಲಿ, ಅನಿಲ ಮುಳಗುಂದ, ಗಂಗಾಧರ ಮೆಣಸಿನಕಾಯಿ, ಮಂಜುನಾಥಗೌಡ ಕೆಂಚನಗೌಡ್ರ, ಭೀಮಣ್ಣ ಯಂಗಾಡಿ, ಚಂದ್ರಶೇಖರ ತಳವಾರ ಮತ್ತಿತರರು ಇದ್ದರು.