ಕನ್ನಡಪ್ರಭ ವಾರ್ತೆ ಮಡಿಕೇರಿ
ಕನ್ನಡಿಗರು ಇತರ ಭಾಷಿಕರಿಗೆ ಕನ್ನಡವನ್ನು ಕಲಿಸುವ ಔದಾರ್ಯ ತೋರಿದರೆ ಕರ್ನಾಟಕವೇ ಕನ್ನಡಮಯವಾಗುತ್ತದೆ ಎಂದು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನ ಕ್ಯಾಂಪಸ್‌ನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಉದ್ಯೋಗ, ವಿದ್ಯಾಭ್ಯಾಸದ ಸಲುವಾಗಿ ಹೊರ ರಾಜ್ಯದ ಜನತೆ ವಿಫುಲವಾಗಿ ಬರುತ್ತಿದ್ದು, ಅವರೊಂದಿಗೆ ನಾವು ಕನ್ನಡವನ್ನೇ ಮಾತನಾಡಿದರೆ ಅವರು ಕನ್ನಡ ಕಲಿಯುತ್ತಾರೆ. ಆ ಕಾರ್ಯವನ್ನು ಎಲ್ಲ ಕನ್ನಡಿಗರು ಅನುಸರಿಸಬೇಕು ಎಂದು ಕರೆ ನೀಡಿದರು.ತಾವು ಮೆಡಿಕಲ್ ವಿದ್ಯಾರ್ಥಿಯಾಗಿದ್ದಾಗ ಸಂಭ್ರಮಿಸಿದ ವಿದ್ಯಾರ್ಥಿ ಜೀವನದ ಸುಮಧುರ ಕ್ಷಣಗಳನ್ನು ಮತ್ತೆ ಮರುಕಳಿಸಲು ಅವಕಾಶ ನೀಡಿದ ಮೆಡಿಕಲ್ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕ ಹಾಗೂ ಕನ್ನಡ ಬರಹಗಾರರಾದ ತೆನ್ನಿರ ಮೈನಾ ಮಾತನಾಡಿ, ಕನ್ನಡ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡದ ಮೇಲೆ ಇತರ ಯಾವ ಭಾಷೆಯೂ ಆಕ್ರಮಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅತಿ ಹೆಚ್ಚಿನ ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರಕಿರುವದನ್ನು ಗಮನಿಸಿದರೆ ಕನ್ನಡದ ಹಿರಿಮೆ, ಗರಿಮೆಯನ್ನು ಊಹಿಸಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಕೆ.ಬಿ.ಕಾರ್ಯಪ್ಪ, ವಿದೇಶಿಯರು ಕೂಡ ಕನ್ನಡದ ಬಗ್ಗೆ ವ್ಯಾಮೋಹ ಹೊಂದಿ ಅನೇಕ ಕೃತಿಗಳನ್ನು ರಚಿಸಿದ್ದರು. ಜರ್ಮನ್‌ರವರಾದ ರೆವರಂಡ್ ಫರ್ಡಿನ್ಯಾಂಡ್ ಕಿಟೆಲ್ ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿದ್ದನ್ನು ಗಮನಿಸಿದಾಗ ಕನ್ನಡ ವಿಶ್ವದ ಜನಪ್ರಿಯ ಭಾಷೆ ಎಂಬುದರ ಅರಿವಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಡಾ.ಮಂತರ್ ಗೌಡ ಹಾಗೂ ತೆನ್ನಿರ ಮೈನಾ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಯಶಸ್, ಕೈಯಾರೆ ರಚಿಸಿದ ಡಾ.ಮಂತರ್ ಗೌಡ ಭಾವಚಿತ್ರವನ್ನು ನೀಡಲಾಯಿತು.ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಪ್ರದರ್ಶನ ನೀಡಿದ ಸ್ವಾಗತ ನೃತ್ಯಕ್ಕೆ ಶಾಸಕರು ಮತ್ತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಿಇಒ ಎ.ಎಲ್.ಸ್ವಾಮಿ, ಮಡಿಕೇರಿ ನಗರಸಭೆಯ ಸದಸ್ಯರಾದ ರಾಜೇಶ್ ಯಲ್ಲಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಎನ್.ನಂಜುಂಡಯ್ಯ, ಡಾ.ರೂಪೇಶ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಡಾ ಮಂಜುನಾಥ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿ ಪ್ರತಿನಿಧಿಗಳಾದ ಕೃಪಾ ಎನ್. ಮತ್ತು ಸುಮಂತ್ ಕಾರ್ಯಕ್ರಮ ನಿರೂಪಿಸಿದರು. ಪ್ರಜ್ಞಾ ಎ.ಎಸ್. ಮತ್ತು ಶಶಾಂಕ್ ಅತಿಥಿಗಳನ್ನು ಪರಿಚಯಿಸಿದರು. ಅನುದೀಪ್ ವಂದಿಸಿದರು.