ವಿದ್ಯಾರ್ಥಿಗಳಿಗೆ ತಾರ್ಕಿತ ಚಿಂತನೆ ಮಾಡುವುದು ಕಲಿಸಿ

KannadaprabhaNewsNetwork |  
Published : Nov 21, 2024, 01:01 AM IST
20ಕೆಆರ್ ಎಂಎನ್ 3.ಜೆಪಿಜಿರಾಮನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ  ಪರೀಕ್ಷೆಯ ಸಮಾಜಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಜಿ.ಶಿವರಾಮಕೃಷ್ಣನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ಉಪನ್ಯಾಸಕರು ಕೇವಲ ಮಾಹಿತಿ ನೀಡುವ ಬದಲು ವಾಸ್ತವಿಕತೆಯನ್ನು ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ ಮತ್ತು ತಾರ್ಕಿಕ ಚಿಂತನೆ ಮಾಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಜಿ.ಶಿವರಾಮಕೃಷ್ಣನ್ ಕಿವಿಮಾತು ಹೇಳಿದರು.

ರಾಮನಗರ: ಉಪನ್ಯಾಸಕರು ಕೇವಲ ಮಾಹಿತಿ ನೀಡುವ ಬದಲು ವಾಸ್ತವಿಕತೆಯನ್ನು ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ ಮತ್ತು ತಾರ್ಕಿಕ ಚಿಂತನೆ ಮಾಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಸಮಾಜಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಜಿ.ಶಿವರಾಮಕೃಷ್ಣನ್ ಕಿವಿಮಾತು ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರ್ಜಾಲದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ. ಅಧ್ಯಾಪಕರು ತರಗತಿಗಳಲ್ಲಿ ಮಾಹಿತಿ ಕೊಡುವ ಅವಶ್ಯಕತೆ ಇಲ್ಲ. ಪಠ್ಯಕ್ರಮವನ್ನು ಬೋಧಿಸುವಾಗ ಜಗತ್ತಿನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಜತೆಗೆ ಸಂಬಂಧವನ್ನು ಕಲ್ಪಿಸಿಕೊಡಬೇಕು. ಅವುಗಳ ಆಗುಹೋಗುಗಳ ಬಗ್ಗೆ ವಿಶ್ಲೇಷಣೆ ನಡೆಸಿ, ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಬಂಧ ಹದಗೆಟ್ಟರೆ ಆತ್ಮಹತ್ಯೆಗಳು ಏರಿಕೆಯಾಗುತ್ತವೆ. ಮಕ್ಕಳು ಅಳುವಾಗ ಪೋಷಕರು, ಸಂಬಂಧಿಕರು, ಸ್ನೇಹಿತರು ಹೆಗಲ ಮೇಲೆ ಕೈ ಇಟ್ಟು ಸಂತೈಸಿದರೆ ಬದುಕಿನ ಬಗ್ಗೆ ಭರವಸೆ ಮೂಡುತ್ತದೆ. ಇಲ್ಲಿ ಮಾಹಿತಿ ನೀಡುವುದಕ್ಕಿಂತ ಮಾತನಾಡಿಸಿ ಆತ್ಮಸ್ಥೈರ್ಯ ತುಂಬುವುದು ಮುಖ್ಯವಾಗುತ್ತದೆ ಎಂದರು.

ಪ್ರಶ್ನೆ ಮಾಡುವ ಮನೋಭಾವವನ್ನು ವಿಮರ್ಶಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು. ಘಟನೋತ್ತರ ವ್ಯಾಖ್ಯಾನಕಾರರೇ ಹೆಚ್ಚುತ್ತಿದ್ದಾರೆ. ಆದರೆ, ಘಟನಾ ಪೂರ್ವದಲ್ಲಿಯೇ ಆ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕು. ನಾಗರಿಕ ಪ್ರಪಂಚದಲ್ಲಿ ವೈಭವೋಪೇತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಸರಳತೆಯನ್ನು ನಗೆಪಾಟಲಿಗೆ ಈಡುಮಾಡುತ್ತಿದ್ದಾರೆ ಶಿವರಾಮಕೃಷ್ಣನ್ ಬೇಸರ ವ್ಯಕ್ತಪಡಿಸಿದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಉಪನ್ಯಾಸಕರು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಹ ವ್ಯಕ್ತಿತ್ವ ಮತ್ತು ಬೋಧನೆಯಲ್ಲಿ ವಿಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಅಧ್ಯಾಪಕರು ಬೋಧಿಸುವ ವಿಭಾಗ ಮತ್ತು ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.

ಕಲಾ ವಿಭಾಗಕ್ಕೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ವಿದ್ಯಾರ್ಥಿಗಳು ತಾಂತ್ರಿಕ, ವಾಣಿಜ್ಯ ಮತ್ತು ವೈದ್ಯಕೀಯ ಸೇರಿದಂತೆ ಇನ್ನಿತರೆ ವೃತ್ತಿಪರ ಕೋರ್ಸ್ ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಯುವಜನರಲ್ಲಿ ಸಾಮಾಜಿಕ ಮೌಲ್ಯಗಳ ಕುಸಿತ ಉಂಟಾಗುತ್ತಿದ್ದು, ವ್ಯವಸ್ಥೆಯ ಮೇಲೆ ತದ್ವಿರುದ್ಧ ಪರಿಣಾಮ ಉಂಟಾಗುತ್ತಿದೆ ಎಂದು ವಿಷಾದಿಸಿದರು.

ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳು ಯಾರನ್ನೋ ಮೆಚ್ಚಿಸಲೋ ಅಥವಾ ಕೇವಲ ಅಂಕ ಗಳಿಕೆಗಷ್ಟೇ ಅಧ್ಯಯನ ಮಾಡದೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳುವಂತಹ ಜ್ಞಾನ ಸಂಪಾದನೆಗೆ ಒತ್ತು ನೀಡಬೇಕು. ಆಗ ಮಾತ್ರ ವ್ಯಕ್ತಿಗತವಾಗಿ ಮತ್ತು ಸಾಮುದಾಯಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು.

ಕಲಿಕೆಗೆ ಯಾವುದೇ ವಿಷಯ ಶ್ರೇಷ್ಠ ಅಥವಾ ಕನಿಷ್ಠವೂ ಅಲ್ಲ. ಆದರೆ, ಕೆಲವರು ಮಾತ್ರ ಕೆಲವು ವಿಷಯ ಶ್ರೇಷ್ಟ ಎಂದು ಭ್ರಮಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹತ್ತಾರು ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ಎಲ್ಲಾ ವಿಷಯಗಳನ್ನು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಚ್.ಸಿ.ರಮೇಶ್, ಓಂಕಾರ ಮೂರ್ತಿ, ಉಪನ್ಯಾಸಕರಾದ ಎನ್.ವೇಣುಗೋಪಾಲ್, ಎಂ.ಸಿ.ಬಸವರಾಜು, ನರಸಿಂಹಸ್ವಾಮಿ, ರಾಮು, ಆರ್.ಎಂ.ಶಂಕರನಾಯಕ್, ಎಸ್ ಡಿಎಂಸಿ ಉಪಾಧ್ಯಕ್ಷ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...............

ವಿದ್ಯಾವಂತರಲ್ಲೇ ಭ್ರಷ್ಟಾಚಾರ, ಜಾತೀಯತೆ, ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದ್ದು, ಸಂಪತ್ತು ಕೆಲವೇ ಮಂದಿಯಲ್ಲಿ ಕೇಂದ್ರೀಕೃತವಾಗುತ್ತಿದೆ. ದ್ವೇಷ, ಅಸೂಯೆ, ಸುಳ್ಳುಗಳನ್ನು ವಿದ್ಯಾವಂತರೇ ಹರಡುತ್ತಿದ್ದಾರೆ. ಎಲ್ಲರಿಗೂ ನ್ಯಾಯ ಸಿಗಬೇಕೆನ್ನುವ ಕನಸು ನನಸಾಗದೆ ಭಯವಾಗುತ್ತಿದೆ.

- ಜಿ.ಶಿವರಾಮಕೃಷ್ಣನ್, ನಿವೃತ್ತ ಪ್ರಾಧ್ಯಾಪಕರು

20ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಜಿಲ್ಲಾ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಸಮಾಜಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕ ಜಿ.ಶಿವರಾಮಕೃಷ್ಣನ್ ಉದ್ಘಾಟಿಸಿದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು