ಕನ್ನಡಪ್ರಭ ವಾರ್ತೆ ಬೀಳಗಿ
ಚಳವಳಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪಂ.ಹಿರೇಮಠ, ತಾಲೂಕಿನ ಅನಗವಾಡಿ ಗ್ರಾಮದಲ್ಲಿ 209 ಎಕರೆ ಹಾಗೂ ಬೀಳಗಿ, ಬಾಡಗಂಡಿ ಸೇರಿದಂತೆ 200 ಎಕರೆಗಿಂತ ಹೆಚ್ಚು ಜಮೀನುಗಳು ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ಘೋಷಿಸಿಕೊಂಡಿದೆ. ಕೋರ್ಟ್‌ನಿಂದ ವಕ್ಫ್ ಬೋರ್ಡ್ ತಡೆಯಾಜ್ಞೆ ತಂದು ನೋಂದಣಿ ಕಚೇರಿಯ ಸ್ಟೇ ಬುಕ್‌ನಲ್ಲಿ ನಮೂದಿಸಿದೆ. ಇದರಿಂದಾಗಿ ರೈತರು ಜಮೀನಿನ ಮೇಲೆ ಬ್ಯಾಂಕ್ ಸಾಲ, ಮಾರಾಟ, ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಸ್ಟೇ ತೆರವುಗೊಳಿಸಲು ವಕ್ಫ್ ಬೋರ್ಡ್‌ಗೆ ಕಟ್ಟುನಿಟ್ಟಾದ ಆದೇಶ ನೀಡಿ, ರೈತರ ವ್ಯವಹಾರಗಳಿಗೆ ಅನೂಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು
ರಾಜ್ಯದ ಮುಖ್ಯಮಂತ್ರಿಗಳು ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಕಡಿಮೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆಯೇ ಹೊರತು, ಸ್ಟೇಯನ್ನು (ತಡೆ) ತೆರವುಗೊಳಿಸಲು ವಕ್ಫ್‌ಗೆ ಸೂಚನೆ ನೀಡಿಲ್ಲ. ಪ್ರತಿಯೊಬ್ಬರು ಇದನ್ನು ಅರಿತು ನ್ಯಾಯ ದೊರೆಯುವವರಿಗೆ ಹೋರಾಟ ಮಾಡಲು ಅಣಿಯಾಗೋಣ ಎಂದು ಕರೆ ನೀಡಿದ ಅವರು, ವಕ್ಫ್ ಬೋರ್ಡ್ ರದ್ದುಗೊಳಿಸಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಕ್ಫ್ ಬಾಧಿತರು ಭಾಗವಹಿಸಬೇಕು ಎಂದು ತಿಳಿಸಿದರು.ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುನಾಥ ಬಗಲಿ ಮಾತನಾಡಿ, ವಕ್ಫ್ ಕಾನೂನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿದೆ. ಇದರ ವಿರುದ್ಧ ಚಳವಳಿ ಮಾಡಿ ವಕ್ಫ್ ಮಂಡಳಿ ತೊಲಗುವವರೆಗೆ ಹೋರಾಟ ಮಾಡೋಣ ಎಂದರು.
-----------
ಕೋಟ್ ಕೆಲವೊಂದು ರೈತರ ಜಮೀನುಗಳು ಮಾತ್ರ ವಕ್ಫ್ ಮಂಡಳಿಗೆ ಹೋಗಿವೆ ಎಂದು ಉಳಿದ ರೈತರು ಸುಮ್ಮನೆ ಕುಳಿತುಕೊಳ್ಳಬಾರದು. ನೊಂದ ರೈತರಿಗೆ ನ್ಯಾಯ ಒದಗಿಸಲು ಪಕ್ಷ ಭೇದ ಹಾಗೂ ಜಾತಿ ಭೇದ ಮಾಡದೇ ವಕ್ಫ್ ಬಾಧಿತ ರೈತರಿಗೆ ಸಾಥ್ ನೀಡಬೇಕು. - ಅನುಸೂಯಾ ತಾಯಿ, ಅನಗವಾಡಿ