ಶಿಗ್ಗಾಂವಿ: ತಾಲೂಕಿನ ಕೋಣನಕೇರಿ ಗ್ರಾಮಕ್ಕೆ ಸಮರ್ಪಕ ಸಾರಿಗೆ ಸೌಲಭ್ಯಕ್ಕೆ ಒತ್ತಾಯಿಸಿ ಹಾಗೂ ಹೆಚ್ಚುವರಿ ಬಸ್ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ತಡೆದು ಡಿಪೋ ಮ್ಯಾನೇಜರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಮುಖಂಡರಾದ ಸಂಜೀವ್ ಜಿ.ಎಂ. ಮಾತಾನಾಡಿ, ಬೊಮ್ಮನಹಳ್ಳಿ ಮಾರ್ಗವಾಗಿ ಆಂದಲಗಿ, ಮುಳಕೇರಿ, ಮುದ್ದಿನಕೊಪ್ಪ, ಶಾಬಳ, ಭದ್ರಾಪುರ, ಕೋಣನಕೇರಿ, ಶಿವಪುರ, ಜಕನಕಟ್ಟಿಯಿಂದ ಶಿಗ್ಗಾಂವಿ ನಗರಕ್ಕೆ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಮಾರ್ಗದಲ್ಲಿನ ಜನಸಂಖ್ಯೆಗನುಗುಣವಾಗಿ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಬೇಕು. ಮುಂಜಾನೆ ೯ಕ್ಕೆ ಹಾಗೂ ಮಧ್ಯಾಹ್ನ ೨ ಗಂಟೆಗೆ ಸರಿಯಾಗಿ ಹೆಚ್ಚುವರಿ ಬಸ್ ಒದಗಿಸಬೇಕೆಂದು ಮನವಿ ಪತ್ರದ ಮೂಲಕ ವಿಭಾಗೀಯ ಸಾರಿಗೆ ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ ಎಂದರು.
ಬಸ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ವಾತಾವರಣ ಸೃಷ್ಟಿಯಾಗಿದ್ದು, ದಯವಿಟ್ಟು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಇಲಾಖೆಗೆ ಕಪ್ಪುಚುಕ್ಕೆ ಬಾರದಂತೆ ಕ್ರಮವಹಿಸಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಹಾಗೂ ಶಾಲಾ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)ನಿಂದ ಆಗ್ರಹಿಸಲಾಯಿತು.ಬಂಕಾಪುರ ಠಾಣೆ ಪಿಎಸ್ಐ ಮಧ್ಯಪ್ರವೇಶ ಮಾಡಿ, ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿ ಶಿಗ್ಗಾಂವಿ ಕೆ.ಎಸ್.ಆರ್.ಟಿ.ಸಿ. ಕಂಟ್ರೋಲರ್ ಜೊತೆಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಬಸ್ಸಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಭರವಸೆ ನೀಡಿದರು. ಆ ನಂತರ ವಿದ್ಯಾರ್ಥಿಗಳು ಹೋರಾಟ ಮುಕ್ತಾಯಗೊಳಿಸಿ ತಮ್ಮ ತಮ್ಮ ಶಾಲಾ-ಕಾಲೇಜುಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ದೇವರಾಜ ಅಕ್ಕಸಾಲಿ, ಉದಯ ಕಬ್ಬನ್ನೂರ, ಮಲ್ಲಿಕಾರ್ಜುನ ಉಪ್ಪಾರ, ದಾದಾಪೀರ್ ಸವಣೂರು, ವಿಜಯ ಮಚ್ಚಿನಕೊಪ್ಪ, ಶಾಬುದೀನ್ ಸವಣೂರು, ಸಾವಿತ್ರಿ, ಲಕ್ಷ್ಮೀ ಎನ್., ಸುಮಾ ಡಿ.ಆರ್., ಕೀರ್ತನಾ ಎಚ್., ದೀಪಾ ಕೆ.ಎಚ್., ಶಿವು ಕೋಣನಕೇರಿ, ಚನ್ನಪ್ಪ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.