ಕನ್ನಡಪ್ರಭ ವಾರ್ತೆ ಹಳೇಬೀಡು
ರೈತರ ಬಳಿಗೆ ಹೋಗಿ ಅನೇಕ ವರ್ಷಗಳಿಂದ ಪರಿಹರಿಸಲಾಗದ ಸಮಸ್ಯೆಗಳನ್ನು ಅರಿತು ಸ್ಥಳದಲ್ಲಿಯೇ ಪರಿಹರಿಸಬೇಕೆಂಬ ಉದ್ದೇಶದಿಂದ ಕಂದಾಯ ಅದಾಲತ್ ಹಮ್ಮಿಕೊಂಡು ರೈತರ ಸಮಸ್ಯೆಗಳನ್ನು ಪರಿಹರಿಸುತ್ತಿರುವುದು ತೃಪ್ತಿ ತಂದಿದೆ ಎಂದು ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಕೆ.ಸುರೇಶ್ ತಿಳಿಸಿದರು.ಹಳೇಬೀಡು ನಾಡಕಚೇರಿಯ ಆವರಣದಲ್ಲಿ ಹೋಬಳಿಯ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ೫೦-೬೦ ವರ್ಷಗಳಿಂದ ಕಂದಾಯ ಇಲಾಖೆಯ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರವನ್ನು ನೀಡಿ ಎಂದು ಎಂದು ಹಳ್ಳಿ ಹಳ್ಳಿಗಳಿಗೆ ಹೋದಂತಹ ಸಂದರ್ಭದಲ್ಲಿ ರೈತರು, ಸಾರ್ವಜನಿಕರು ಮನವಿ ಮಾಡಿದ ಮೇರೆಗೆ ರೈತರಿಗೆ ಅನುಕೂಲ ಮಾಡಬೇಕೆಂಬ ಆಶಯದೊಂದಿಗೆ ಕ್ಷೇತ್ರದ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ. ರೈತರು ತಮ್ಮ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಲ್ಲಿ ತಿಳಿಸಿ ಅವುಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ಇತ್ಯರ್ಥವಾಗುವ ಆದಷ್ಟು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು, ಉಳಿದ ಸಮಸ್ಯೆಗಳಿಗೆ ನಿಗಧಿತ ಅವಧಿಯೊಳಗೆ ಪರಿಹರಿಸಿಕೊಡಲಾಗುವುದು ಎಂದರು.ಹಳೇಬೀಡು ದೊಡ್ಡ ಹೋಬಳಿಯಾಗಿದ್ದು, ೯ ಗ್ರಾಮ ಪಂಚಾಯಿತಿಗಳನ್ನು ಹೊಂದಿರುತ್ತದೆ. ಅತ್ಯಂತ ಹೆಚ್ಚು ಕೃಷಿಕರೇ ವಾಸ ಮಾಡುತ್ತಿರುವ ಹಳೇಬೀಡು ಹೋಬಳಿಯಲ್ಲಿ ರೈತರ ಹೆಚ್ಚು ಸಮಸ್ಯೆಗಳಿದ್ದು, ಕಂದಾಯ ಇಲಾಖೆಗೆ ಸಂಬಂಧಿಸಿದ ಅವರ ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಜೊತೆ ಜೊತೆಗೆ ಇತರೆ ಇಲಾಖೆಯ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು. ದೇಶಕ್ಕೆ ಅನ್ನ ಕೊಡುವ ಅನ್ನದಾತರಾದ ರೈತರು ಸಣ್ಣ ಹಿಡುವಳಿದಾರರಾಗಿದ್ದು, ಜಮೀನನ್ನೇ ನಂಬಿ ಜೀವನ ಮಾಡುತ್ತಿರುವ ರೈತರು ಸಮಸ್ಯೆಗಳನ್ನು ಹೊತ್ತು ತಂದ ಸಂದರ್ಭದಲ್ಲಿ ಅಧಿಕಾರಿಗಳು, ಸಿಬ್ಬಂದಿ ಅವರ ಸಮಸ್ಯೆಯನ್ನು ಆಲಿಸಿ ಸಮಸ್ಯೆಯನ್ನು ಪರಿಹರಿಸಿಕೊಡಿ. ರೈತರು ಸಮೃದ್ಧವಾದರೆ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂಬ ಅಂಶವನ್ನು ಮನಗಂಡು ಅವರಿಗೆ ಗೌರವಿಸುವ ಕೆಲಸವನ್ನು ಮಾಡಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಹಸೀಲ್ದಾರ್ ಎಂ.ಮಮತಾರವರು ಬೇಲೂರು ಶಾಸಕರರಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದ್ದು, ಅವರ ಆಶಯದಂತೆಯೇ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಕಂದಾಯ ಅದಾಲತ್ ಹಮ್ಮಿಕೊಂಡಿದ್ದು, ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರು ಕೂಡಾ ಅವುಗಳನ್ನು ಪರಿಹರಿಸಲು ನಾವು ಸಿದ್ಧವಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಸಾರ್ವಜನಿಕರು ಪೌತಿಖಾತೆ, ಪೋಡಿ ದುರಸ್ತಿ, ಪಹಣಿ ಅದಲು ಬದಲು, ಪಿಂಚಣಿ ಹೀಗೆ ಅನೇಕ ಅಹವಾಲುಗಳನ್ನು ಶಾಸಕರ ಸಮ್ಮುಖದಲ್ಲಿ ಪ್ರಸ್ತಾಪಿಸಿದ್ದು, ಆ ಎಲ್ಲ ಸಮಸ್ಯೆಗಳನ್ನು ಆಲಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದು, ಬಂದಂತಹ ಅಷ್ಡು ಸಾರ್ವಜನಿಕರು ಶಾಸಕರ ಈ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಶಿರಸ್ತೇದಾರ್ ಮಹೇಂದ್ರ, ಎ.ಡಿ.ಎಲ್.ಆರ್ ಗಂಗಯ್ಯ, ದೊಡ್ಡಕೋಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಸಂತಕುಮಾರಿ, ಗೋಣಿಸೋಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಧರ್ಮಪ್ಪ ಹಾಗೂ ರಾಜಸ್ವ ನಿರೀಕ್ಷಕ(ಆರ್.ಐ) ಮಹೇಶ್ ಇತರೆ ಅಧಿಕಾರಿಗಳು, ರೈತ ಮುಖಂಡ ಕುಮಾರ್, ಸ್ಥಳೀಯ ಜನತೆ ಉಪಸ್ಥಿತರಿದ್ದರು.