ಮಾತೃಭಾಷೆಯ ಸೊಗಡು ಮಕ್ಕಳಿಗೆ ತಿಳಿಸಿಕೊಡಿ

KannadaprabhaNewsNetwork |  
Published : Jan 06, 2025, 01:03 AM IST
ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಜರುಗಿದ ಬಳ್ಳಾರಿ ಜಿಲ್ಲಾ ಕಲಾವೈಭವ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ನೃತ್ಯಪ್ರದರ್ಶನಗಳು ಜರುಗಿದವು.  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲಾ ಕಲಾವೈಭವ-2025 " ಸಾಂಸ್ಕೃತಿಕ ಸಡಗರಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆಬಿತ್ತು.

ಬಳ್ಳಾರಿ: ಜಿಲ್ಲಾ ಕಲಾವಿದರ ಸಂಘ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ "ಬಳ್ಳಾರಿ ಜಿಲ್ಲಾ ಕಲಾವೈಭವ-2025 " ಸಾಂಸ್ಕೃತಿಕ ಸಡಗರಕ್ಕೆ ಭಾನುವಾರ ಸಂಜೆ ಸಂಭ್ರಮದ ತೆರೆಬಿತ್ತು. ಸಂಜೆ ಜರುಗಿದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಹಾಗೂ ಸಾಂಸ್ಕೃತಿಕ ಚಿಂತಕ ಎಂ.ಚಂದ್ರಶೇಖರಗೌಡ ಮಸೀದಿಪುರ, ಈ ಹಿಂದಿನಿಂದಲೂ ಪೋಷಣೆ ಮಾಡಿಕೊಂಡು ಬಂದಿರುವ ಕಲಾಪ್ರಕಾರಗಳ ಮಹತ್ವ ಹಾಗೂ ಮುಂದಿನ ಪೀಳಿಗೆಗೆ ಅಪರೂಪದ ಕಲೆಗಳನ್ನು ಉಳಿಸಿಕೊಂಡು ಹೋಗಬೇಕಾದ ತುರ್ತು ಜವಾಬ್ದಾರಿ ಕುರಿತು ತಿಳಿಸಿದರು. ಹಿಂದಿನದು ಮರೆತರೆ ಮುಂದಿನ ಭವಿಷ್ಯವಿಲ್ಲ. ಮಾತೃಭಾಷೆಯ ಸೊಗಡು ಮಕ್ಕಳಿಗೆ ತಿಳಿಸಿಕೊಡಬೇಕು. ಭಾಷೆಯಿಲ್ಲದೆ ಬದುಕಿಲ್ಲ ಎಂಬುದನ್ನು ಇಂದಿನ ಪೀಳಿಗೆಗೆ ಅರ್ಥ ಮಾಡಿಸಬೇಕು ಎಂದರು.

ಕರ್ನಾಟಕ ಏಕೀಕರಣಕ್ಕಾಗಿ ಪಿಂಜಾರ್ ರಂಜಾನಸಾಬ್ ಸೇರಿದಂತೆ ಅನೇಕ ಮಹನೀಯರು ತ್ಯಾಗ-ಬಲಿದಾನ ಮಾಡಿದ್ದಾರೆ. ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಕನ್ನಡ ಭಾಷೆ, ಕನ್ನಡದ ಪರಂಪರೆ, ಕನ್ನಡದ ಸಾಹಿತ್ಯ ಹಾಗೂ ಕಲೆಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಿ. ಈ ಎಲ್ಲವೂ ಮಕ್ಕಳಿಗೆ ಸಂಸ್ಕಾರ ನೀಡುವ ಸಾಧನೆಗಳು ಎಂಬುದನ್ನು ಪೋಷಕರು ಮರೆಯಬಾರದು. ನಾವೆಷ್ಟೇ ವಿಜ್ಞಾನದ ಆವಿಷ್ಕಾರ ಮಾಡಿರಬಹುದು. ಆದರೆ, ಸಂಸ್ಕಾರದ ಆವಿಷ್ಕಾರ ಆಗದಿದ್ದರೆ ಭವಿಷ್ಯದ ಭಾರತ ಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ ಪಂಪನಗೌಡ ಮೇಲುಸೀಮೆ, ಜಿಲ್ಲೆಯ ಕಲಾ ಶ್ರೀಮಂತಿಕೆ, ರಂಗಭೂಮಿಗೆ ಬಳ್ಳಾರಿ ನೀಡಿರುವ ಅನನ್ಯ ಕೊಡುಗೆ ಹಾಗೂ ಕಲೆಯ ಬೆಳವಣಿಗೆಗೆ ಕಲಾ ಸಂಸ್ಥೆಗಳ ಜವಾಬ್ದಾರಿ ಕುರಿತು ಮಾತನಾಡಿ, ಸರ್ಕಾರದ ಅಧಿಕಾರಿಯಾಗಿ ಕಲಾವಿದರಿಗೆ ಬೇಕಾದ ಪ್ರೋತ್ಸಾಹ ನೀಡಲು ಸಿದ್ಧ; ಕಲಾವಿದರ ನೆರವಿಗೆ ಬದ್ಧ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿದರು. ಜಂಗಮಹೊಸಹಳ್ಳಿಯ ಪುರವರ್ಗ ಮಠದ ಅಜಾತ ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಲೇಖಕ ಡಾ.ಸಿದ್ದರಾಮ ಕಲ್ಮಠ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್, ಲೆಕ್ಕಪರಿಶೋಧಕರಾದ ಸಿದ್ದರಾಮೇಶ್ವರಗೌಡ ಕರೂರು, ಸಿ.ಎರಿಸ್ವಾಮಿ, ಜೆಟಿ ಫೌಂಡೇಶನ್‌ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಮುದ್ದಟನೂರು, ಖಜಾಂಚಿ ರಮಣಪ್ಪ ಭಜಂತ್ರಿ, ಜಂಟಿ ಕಾರ್ಯದರ್ಶಿ ವೀರೇಶ ದಳವಾಯಿ, ಸುಬ್ಬಣ್ಣ ಮತ್ತಿತರರಿದ್ದರು. ಎಂ.ವಿನೋದ್ ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಸನ್ಮಾನಿಸಲಾಯಿತು. 2 ದಿನಗಳ ಕಲಾವೈಭವದ ಸಡಗರದಲ್ಲಿ ಹತ್ತಾರು ಕಲಾ ಪ್ರಕಾರಗಳ ನೂರಾರು ಕಲಾವಿದರ ಮೆರವಣಿಗೆ, ಪ್ರದರ್ಶನ, ಕವಿ-ಕಾವ್ಯ-ಕುಂಚ-ಗಾಯನ, ಸುಗಮಸಂಗೀತ, ಜನಪದ ಗಾಯನ, ಕೊಳಲುವಾದನ, ರಂಗಗೀತೆಗಳ ಪ್ರಸ್ತುತಿ, ವೀಣಾವಾದನ, ಕೂಚುಪುಡಿ ನೃತ್ಯ, ಸಮೂಹ ನೃತ್ಯಗಳು, ಗೊಂಬೆಕುಣಿತ, ಜಾದೂಪ್ರದರ್ಶನ, ಸಾಮಾಜಿಕ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನಗಳು ಜರುಗಿದವು.

ಬಳ್ಳಾರಿಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಸಂಜೆ ಜರುಗಿದ ಬಳ್ಳಾರಿ ಜಿಲ್ಲಾ ಕಲಾವೈಭವ ಕಾರ್ಯಕ್ರಮದಲ್ಲಿ ವಿವಿಧ ತಂಡಗಳಿಂದ ನೃತ್ಯಪ್ರದರ್ಶನಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು