ಕನ್ನಡಪ್ರಭ ವಾರ್ತೆ ಬೆಳಗಾವಿ
ರಕ್ತ ಅಂದರೆ ಜೀವ. ರಕ್ತದಾನ ಮಾಡುವುದರಿಂದ ಮನಸ್ಸಿಗೆ ತೃಪ್ತಿ ಸಿಗುತ್ತದೆ. ಯುವಜನತೆಯಲ್ಲಿ ರಕ್ತದಾನದ ಮಹತ್ವವನ್ನು ತಿಳಿಸಿ ಅವರಲ್ಲಿ ರಕ್ತದಾನದ ಪ್ರಜ್ಞೆ ಬೆಳೆಸಬೇಕು. ರಕ್ತದಾನದಿಂದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಇದೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.ನಗರದ ಸಿವಿಲ್ ಆಸ್ಪತ್ರೆಯ ಐಎಂಎ ಆವರಣದಲ್ಲಿ ಇತ್ತೀಚೆಗೆ ಡಾ.ಗಿರೀಶ ಸೋನವಾಲ್ಕರ್ ಹುಟ್ಟುಹಬ್ಬದ ಪ್ರಯುಕ್ತ ಡಾ.ಗಿರೀಶ ಸೋನವಾಲ್ಕರ್ ಫೌಂಡೇಶನ್, ಲೇಕವ್ಯೂ ಆಸ್ಪತ್ರೆಯ ಡಾ.ಗಿರೀಶ ಸೋನವಾಲ್ಕರ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಆರೋಗ್ಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿದ ಮಾತನಾಡಿದ ಅವರು, ರಕ್ತ ಮನುಷ್ಯನ ದೇಹದ ಅಮೂಲ್ಯವಾದ ವಸ್ತು. ಅಪಘಾತ, ಅನಾಹುತ, ಶಸ್ತ್ರ ಚಿಕಿತ್ಸೆ ಮುಂತಾದ ರೋಗಿಗಳಿಗೆ ರಕ್ತದ ಅಗತ್ಯ ಇರುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ರಕ್ತ ಕೊಡಬೇಕಾಗುತ್ತದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತದೆ ಎಂದರು.
ಪ್ರತಿ 18 ವರ್ಷ ಮೇಲ್ಪಟ್ಟು 60 ವರ್ಷದ ಒಳಗಿನವರು ರಕ್ತದಾನ ಮಾಡಬಹುದು. ಪ್ರತಿಯೊಬ್ಬರೂ ತನ್ನ ರಕ್ತದ ಗುಂಪು ಯಾವುದೆಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಮೂಲಕ ರೋಗಿಗಳ ರಕ್ತದ ಗುಂಪಿಗೆ ಅನ್ವಯವಾಗುವಂತೆ ನೀಡಲಾಗುತ್ತದೆ. 3 ತಿಂಗಳಿಗೊಮ್ಮೆಯಂತೆ ರಕ್ತದಾನ ಮಾಡಬಹುದು. ಇದರಿಂದ ರಕ್ತದಾನಿಯ ಆರೋಗ್ಯದ ಮೇಲೆ ಯಾವುದೇ ತೊಂದರೆಯಾಗುವುದಿಲ್ಲ. ಇದರ ಜತೆಯಲ್ಲಿ ರಕ್ತದಾನಿಯ ಆರೋಗ್ಯವೂ ಸುಧಾರಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಗ್ಯವಂತರು ರಕ್ತದಾನ ಮಾಡುವುದರ ಮೂಲಕ ಹಲವಾರು ರಕ್ತದ ಅವಶ್ಯಕತೆ ಇರುವಂಥ ರೋಗಿಗಳಿಗೆ ಆಶಾಕಿರಣಗಳಾಗಬೇಕು ಎಂದು ಕೋರಿದರು.ರಕ್ತದಾನ ಎಂಬುದು ಪುಣ್ಯದ ಕೆಲಸ. ಒಬ್ಬ ರಕ್ತದಾನ ಮಾಡುವುದರಿಂದ 3-4 ಮಂದಿಯ ಜೀವ ಉಳಿಸಬಹುದಾಗಿದೆ. ಪ್ರತಿದಿನ ನಮಗೆ 100-150 ಯುನಿಟ್ ರಕ್ತದ ಅಗತ್ಯ ಇರುತ್ತದೆ. ಆ ಸ್ವಯಂ ಪ್ರೇರಿತರಾಗಿ ನೂರಾರು ಜನ ರಕ್ತದಾನ ಮಾಡಿರುವುದು ಒಳ್ಳೆಯ ಕೆಲಸ, ಎಲ್ಲರೂ ರಕ್ತದಾನ ಮಾಡುವುದರಿಂದ ಜನರಲ್ಲಿರುವ ತಪ್ಪು ಕಲ್ಪನೆಯನ್ನು ಕೂಡ ದೂರ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಡಾ.ಗಿರೀಶ ಸೋನವಾಲ್ಕರ್ ಫೌಂಡೇಶನ್, ಲೇಕವ್ಯೂ ಆಸ್ಪತ್ರೆಯ ವತಿಯಿಂದ ರಕ್ತದಾನ ಮಾಡಿದ ರಕ್ತದಾನಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ರಕ್ತದಾನ ಮಾಡಿದ ದಾನಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ದಾನಿಗಳಿಂದ ಒಟ್ಟು 100 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ರಕ್ತದಾನಿಗಳು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಡಿಸಿಪಿ ನಾರಾಯಣ ಬರಮನಿ, ಸಿಪಿಐ ಬಿ.ಆರ್.ಗಡ್ಡೆಕರ್, ಬೆಳಗಾವಿ ರಕ್ತದಾನ ಕೇಂದ್ರ ವೈದ್ಯಾಧಿಕಾರಿ ವಿಜಯಕುಮಾರ ತೆಲಸಂಗ, ಪ್ರಕಾಶ ಸೋನವಾಲ್ಕರ್, ಅಮನ್ ಶೇಠ, ಲಕ್ಷ್ಮೀ ಬಾಯಿ ಸೋನವಾಲ್ಕರ್, ಶ್ವೇತಾ ಸೋನವಾಲ್ಕರ್, ಅನೀಶ ಸೋನವಾಲ್ಕರ್, ನ್ಯಾಯವಾದಿ
ರವಿ ಜುಗನ್ನವರ, ವಿಜಯ ಸೋನವಾಲ್ಕರ್, ರಂಗನಾಥ ಮಳಲಿ ಮೊದಲಾದವರು ಉಪಸ್ಥಿತರಿದ್ದರು.ಡಾ.ಗಿರೀಶ ಸೋನವಾಲ್ಕರ್ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಹಾಗೂ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಅತೀವ ಸಂತೋಷವಾಗಿವೆ. ಲೇಕವ್ಯೂ ಆಸ್ಪತ್ರೆಯೂ ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.-ಆಸೀಫ್ ಸೇಠ್, ಶಾಸಕರು