ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಯಿಸಿ : ಬಸವರಾಜ ರೊಟ್ಟಿ

KannadaprabhaNewsNetwork |  
Published : Sep 20, 2025, 01:03 AM IST
 ಜಾಗತಿಕ ಲಿಂಗಾಯತ ಮಹಾಸಭೆ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಧರ್ಮದ ಕಾಲಂ 8 ರಲ್ಲಿ ಕ್ರಮಾಂಕ 11 (ಇತರೆ) ರಲ್ಲಿ ಲಿಂಗಾಯತ ಎಂದು ಬರೆಸಬೇಕು. ಜಾತಿ ಕಾಲಂ 9ರಲ್ಲಿ ಲಿಂಗಾಯತ ಧರ್ಮದೊಂದಿಗೆ ತಮ್ಮ ಒಳಪಂಗಡ ಬರೆಸುವಂತೆ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.

 ಬೆಳಗಾವಿ :  ಧರ್ಮದ ಕಾಲಂ 8 ರಲ್ಲಿ ಕ್ರಮಾಂಕ 11 (ಇತರೆ) ರಲ್ಲಿ ಲಿಂಗಾಯತ ಎಂದು ಬರೆಸಬೇಕು. ಜಾತಿ ಕಾಲಂ 9ರಲ್ಲಿ ಲಿಂಗಾಯತ ಧರ್ಮದೊಂದಿಗೆ ತಮ್ಮ ಒಳಪಂಗಡ ಬರೆಸುವಂತೆ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಜಾತಿಗಣತಿ ಸಮೀಕ್ಷೆಯಲ್ಲಿ ಸುಮಾರು 60 ಕಾಲಂಗಳಿವೆ. ಇದರಲ್ಲಿ ಕುಟುಂಬದ ಮಾಹಿತಿ ಆರ್ಥಿಕ ಸ್ಥಿತಿ ಮುಂತಾದ ವಿವರಗಳನ್ನು ಒಳಗೊಂಡಿವೆ. ಈ ಸಮೀಕ್ಷೆಯಲ್ಲಿ ಧರ್ಮ, ಜಾತಿಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಂತ ಮಹತ್ವದ ವಿಷಯ ಆಗಿದೆ ಎಂದರು.

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಸರ್ವ ಸ್ವತಂತ್ರ ಧರ್ಮ ಲಿಂಗಾಯತ. ವರ್ಣಾಶ್ರಮ ಪದ್ಧತಿ, ಮೇಲು-ಕೀಳು, ಸ್ಪರ್ಶ ಅಸ್ಪರ್ಶ, ಬಡವ- ಬಲ್ಲಿದ, ಜಾತಿ- ಮತ- ಪಂಥ, ಭಾಷೆ, ಲಿಂಗ, ಬೇಧ ಇಲ್ಲದ ಸಮ ಸಮಾಜವನ್ನು ಬಸವಣ್ಣ ನಿರ್ಮಾಣ ಮಾಡಿದ್ದರು. ಎಲ್ಲ ಭೇದ, ಭಾವ ತೊಡೆದು ಹಾಕಿ ಸಮಾಜ ಸುಧಾರಣೆಗಾಗಿ ಅನುಭವ ಮಂಟಪ ಸ್ಥಾಪಿಸಿದ್ದರು. ಈ ಮೂಲಕ ರಾಜಸತ್ತೆ ಕಾಲದಲ್ಲಿ ಪ್ರಜಾಸತ್ತೆಗೆ ನಾಂದಿ ಹಾಡಿದ್ದರು. ಅಂತಹ ಲಿಂಗಾಯತ ಧರ್ಮದ ಆಚರಣೆಗಳು ಉಳಿದ ಧರ್ಮಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದರು.

ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳಲ್ಲೂ ಕೂಡ ಲಿಂಗಾಯತ ಧರ್ಮದ ಬಗ್ಗೆ ಉಲ್ಲೇಖಿಸಲಾಗಿದೆ. ಆದ್ದರಿಂದ ಲಿಂಗಾಯತರು ಈ ಸಮೀಕ್ಷೆಯಲ್ಲಿ ಧರ್ಮ ಲಿಂಗಾಯತ ಎಂದು ನಮೂದಿಸಬೇಕು. ಜಾತಿ ಕಾಲಂನಲ್ಲಿ ಲಿಂಗಾಯತದೊಂದಿಗೆ ಆಯಾ ಒಳಪಂಗಡ (ಜಾತಿ) ಬರೆಸಬೇಕು. ಮೀಸಲಾತಿ ಸೌಲಭ್ಯ ಪಡೆಯುತ್ತಿರುವ ಒಳಪಂಗಡಗಳು ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತ ನಮೂದಿಸಿದರೆ ಮೀಸಲಾತಿ ಸೌಲಭ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಗೆ ಸರ್ವೋಚ್ಛ ನ್ಯಾಯಾಲಯದ ತೀರ್ಪು ಕೂಡ ಇದೆ ಎಂದು ಹೇಳಿದರು.

ಕ್ರಿಶ್ಚಿಯನ್ ಲಿಂಗಾಯತ ವಿಚಾರಕ್ಕೆ ವಿರೋಧ ವ್ಯಕ್ತವಾಗಿರುವುದಕ್ಕೆ ಈ ಸಂಬಂಧ ಈಗಾಗಲೇ ಡಾ.ಶಿವಾನಂದ ಜಾಮಾದಾರ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಆಕ್ಷೇಪ ವ್ಯಕ್ತಪಡಿಸಿದೆ. ಅದು ತಿದ್ದುಪಡಿ ಆಗುವ ಸಾಧ್ಯತೆ ಇದೆ. ಬದಲಾವಣೆ ಆಗದಿದ್ದರೆ ಮುಂದೆ ಹೋರಾಟ ಮಾಡುವ ಅನಿವಾರ್ಯತೆ ಸೃಷ್ಟಿ ಆಗಲಿದೆ ಎಂದು ಎಚ್ಚರಿಸಿದರು.

ಸೆ.1ರಿಂದ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನವು ಈಗಾಗಲೇ 19 ಜಿಲ್ಲೆಗಳನ್ನು ತಲುಪಿದೆ. ಅ.5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತರು ಪಾಲ್ಗೊಳ್ಳಬೇಕು ಎಂದು ಕೋರಿದರು. ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಪದಾಧಿಕಾರಿಗಳಾದ ಅಶೋಕ ಮಳಗಲಿ, ಮೋಹನ ಗುಂಡ್ಲೂರ, ಪ್ರವೀಣ ಚಕ್ಕಲಿ, ಸಿ.ಎಂ. ಬೂದಿಹಾಳ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ