ತೆಂಕನಿಡಿಯೂರು ಕಾಲೇಜಿನಲ್ಲಿ ಶಿಕ್ಷಕ - ರಕ್ಷಕ ಮಹಾಸಭೆ

KannadaprabhaNewsNetwork | Published : Jun 20, 2024 1:06 AM

ಸಾರಾಂಶ

ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ೨೦೨೩-೨೪ನೇ ಸಾಲಿನ ಶಿಕ್ಷಕ-ರಕ್ಷಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ೨೦೨೩-೨೪ನೇ ಸಾಲಿನ ಶಿಕ್ಷಕ-ರಕ್ಷಕ ಸಭೆ ನಡೆಯಿತು.

ಉಡುಪಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಉದ್ಘಾಟಿಸಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸೈಬರ್ ಅಪರಾಧಗಳು ಗಣನೀಯವಾಗಿ ಹೆಚ್ಚುತ್ತಿದ್ದು ಯುವ ಜನತೆಯಿಂದ ವೃದ್ಧರ ತನಕ ಎಲ್ಲರೂ ಎಚ್ಚರಿಕೆ ವಹಿಸಬೇಕು. ವಿದ್ಯಾವಂತರೇ ಹೆಚ್ಚಾಗಿ ಸೈಬರ್ ಅಪರಾಧಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ. ಇದರ ಜೊತೆಗೆ ಇಂದಿನ ಯುವ ಜನತೆಯಲ್ಲಿ ಮಾದಕ ದ್ರವ್ಯ ವ್ಯಸನವೂ ಕಂಡಬರುತ್ತಿದ್ದು, ಶಿಕ್ಷಣ ಇಲಾಖೆಯ ಜೊತೆ ಪಾಲಕರು-ಶಿಕ್ಷಕರು ಒಟ್ಟಾಗಿ ಈ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಾಗಲೂ ವಿದ್ಯಾರ್ಥಿಗಳು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್ ರಾವ್ ಎಂ., ಲಯನ್ಸ್ ಕ್ಲಬ್ ಉಡುಪಿ ಅಮೃತ್ ಅಧ್ಯಕ್ಷ ಭಾರತಿ ಹೆಚ್.ಎಸ್. ಶುಭ ಹಾರೈಸಿದರು. ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕ-ರಕ್ಷಕ ಸಂಘ ಅಧ್ಯಕ್ಷೆ ಸುಜಾತ, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ರಾಧಾಕೃಷ್ಣ, ಡಾ. ರಾಘವ ನಾಯ್ಕ, ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು.

೨೦೨೪-೨೫ನೇ ಸಾಲಿಗೆ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾಗಿ ಭಾರತಿ ಕೆ. ಕಾಮತ್, ಉಪಾಧ್ಯಕ್ಷರಾಗಿ ರಾಧಾಕೃಷ್ಣ ಪೈ, ಕಾರ್ಯದರ್ಶಿಯಾಗಿ ಪ್ರಮೀಳ, ಜಂಟಿಕಾರ್ಯದರ್ಶಿಯಾಗಿ ಶ್ರೀಮತಿ ಕೃಷ್ಣಯ್ಯ ಆಚಾರ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಕ ರಕ್ಷಕ ಸಂಘದ ಪದವಿ ವಿಭಾಗ ಸಂಚಾಲಕ ಉಮೇಶ್ ಪೈ ಅತಿಥಿಗಳನ್ನು ಸ್ವಾಗತಿಸಿದರು. ಸ್ನಾತಕೋತ್ತರ ವಿಭಾಗ ಸಂಚಾಲಕ ತಿಮ್ಮಣ್ಣ ಜಿ. ಭಟ್ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share this article