ಭಟ್ಕಳ: ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಭದ್ರ ಬುನಾದಿ ಒದಗಿಸಲು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ ಬೇಟಿ ಪಡಾವೋ ಆಂದೋಲನದಿಂದ ಪ್ರೇರಣೆಗೊಂಡು ಆತ್ಮನಿರ್ಭರ ಬಾಲಿಕಾ ಸಂಘ ಸ್ಥಾಪಿಸಿ ಯಶಸ್ವಿಯಾದ ಶಿಕ್ಷಕ ಪರಮೇಶ್ವರ ನಾಯ್ಕ ಅವರ ಸಾಧನೆ ಗಮನಾರ್ಹವಾದುದು. ಭಟ್ಕಳ ತಾಲೂಕಿನ ಕೊಡ್ಸುಳು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ನಾಯ್ಕ ವಿದ್ಯಾರ್ಥಿನಿಯರಿಗೆ ಉಳಿತಾಯದ ಮಹತ್ವ ವಿವರಿಸಿ ಸಂಘವನ್ನು ಸ್ಥಾಪಿಸಿ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ದಾರಿಮಾಡಿಕೊಟ್ಟು ಮಹತ್ವದ ಸಾಧನೆ ಮಾಡಿದ್ದಾರೆ.
ಅವರು ತಮ್ಮ ಜನವಸತಿ ಪ್ರದೇಶಗಳಲ್ಲಿ ಎಂಟು ಹತ್ತು ವಿದ್ಯಾರ್ಥಿನಿಯರ ಸಂಘ ಸ್ಥಾಪಿಸಿದರು. ವಾರಕ್ಕೊಮ್ಮೆ ಸಭೆ ಸೇರಿ ₹20 ಹೂಡಿಕೆ ಮಾಡಿದರು. ಇದರಿಂದ ಲಕ್ಷಾಂತರ ರು. ಸಂಗ್ರಹವಾಯಿತು. ಅದರ ಸಹಾಯದಿಂದ ವಿದ್ಯಾರ್ಥಿನಿಯರು ತಮ್ಮ ಆರೋಗ್ಯ, ಶಾಲಾ ಶುಲ್ಕ, ನೈರ್ಮಲ್ಯ ಸಾಮಗ್ರಿಗಳ ಖರೀದಿ, ಬಸ್ ಪಾಸ್ ಶುಲ್ಕ, ಶಾಲಾ ಸಮವಸ್ತ್ರದ ಶುಲ್ಕ ಹಾಗೆ ಇನ್ನಿತರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಹಾಯಕವಾಯಿತು. ಅಲ್ಲದೆ, ಈ ವಿದ್ಯಾರ್ಥಿನಿಯರು ತಮ್ಮ ಪಕ್ಕದ ಗ್ರಾಮದ ವಿದ್ಯಾರ್ಥಿನಿಯರಿಗೂ ಇದರ ಪ್ರಯೋಜನ ನೀಡುತ್ತಾ ಬಂದಿದ್ದಾರೆ.
2019ರಲ್ಲಿ ಕರ್ನಾಟಕ ಸರ್ಕಾರ ಇದನ್ನು ಗುರುತಿಸಿ ಐದನೇ ತರಗತಿಯ ಕಲಿಕಾ ಚೇತರಿಕೆಯ ಪುಸ್ತಕದಲ್ಲಿ ಈ ವಿಷಯವನ್ನು ಸವಿಸ್ತಾರವಾಗಿ ಪ್ರಕಟಿಸಿತು. ಇದರಿಂದಾಗಿ ರಾಜ್ಯಾದ್ಯಂತ ಈ ಸಂಘದ ಕಾರ್ಯ ಪ್ರಸಾರವಾಯಿತು. ತಾಲೂಕು ಆಡಳಿತ 2020ರಲ್ಲಿ ಗಣರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಇವರನ್ನು ಗೌರವಿಸಿದೆ.ನಾನು ಬಡ ಕುಟುಂಬದಿಂದ ಬಂದವ. ಆರ್ಥಿಕ ಅನುಕೂಲತೆ ಇಲ್ಲದೇ ನನ್ನ ಮೂವರು ಸಹೋದರಿಯರು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು. ಇಂತಹ ಪರಿಸ್ಥಿತಿ ನಮ್ಮ ವಿದ್ಯಾರ್ಥಿನಿಯರಿಗೆ ಆಗಬಾರದು. ಸರಾಗವಾಗಿ ಅವರ ಶಿಕ್ಷಣ ಮುಂದುವರಿಯಬೇಕು ಎಂದು ಈ ಯೋಜನೆ ಆರಂಭಿಸಿ ಯಶಸ್ವಿಯಾದೆ ಎನ್ನುತ್ತಾರೆ ಕೊಡ್ಸುಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ನಾಯ್ಕ.