ಕನ್ನಡಪ್ರಭ ವಾರ್ತೆ ಮಡಿಕೇರಿ
ಶಿಕ್ಷಕರು ಮಕ್ಕಳ ಹೃದಯದಲ್ಲಿ ಸದಾ ಇರುತ್ತಾರೆ. ಮಕ್ಕಳ ಮನಸ್ಸಿನಿಂದ ಶಿಕ್ಷಕರನ್ನು ತೆಗೆಯಲು ಸಾಧ್ಯವಿಲ್ಲ. ಆ ದಿಸೆಯಲ್ಲಿ ಶಿಕ್ಷಕರೇ ದೇವರು ಎಂದು ಶಾಸಕ ಡಾ.ಮಂತರ್ ಗೌಡ ಪ್ರತಿಪಾದಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಆಶ್ರಯದಲ್ಲಿ ನಗರದ ಕೊಡಗು ಗೌಡ ಸಮಾಜದ ಮುಖ್ಯ ಸಭಾಂಗಣದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಲ್ಲಿ ಹೆಚ್ಚಿನ ಪ್ರಭಾವ ಬೀರುತ್ತಾರೆ. ಶಿಕ್ಷಕರ ಪ್ರತಿಯೊಂದು ಗುಣವೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಕರ ಮಾರ್ಗದರ್ಶನ ಸದಾ ಸ್ಮರಣೀಯವಾಗಿದೆ ಎಂದು ಅವರು ನುಡಿದರು.ಕೊಡಗು ಜಿಲ್ಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನ ಪಡೆದಿರುವುದು ಹಾಗೂ ಗುಣಮಟ್ಟದ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಕರ ವೃತ್ತಿ ಹೆಚ್ಚಿನ ಜವಾಬ್ದಾರಿ ಹೊಂದಿದೆ. ಆ ದಿಸೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶಿಕ್ಷಕರು ಸೇರಿದಂತೆ ಎಲ್ಲರೂ ಶ್ರಮಿಸಬೇಕಿದೆ ಎಂದರು.ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಮಕ್ಕಳ ಮೇಲೆ ಶಿಕ್ಷಕರು ಹೆಚ್ಚಿನ ಪ್ರಭಾವ ಮತ್ತು ಪರಿಣಾಮ ಬೀರುತ್ತಾರೆ. ಆ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಅನ್ನದಾನ ಮತ್ತು ವಿದ್ಯಾದಾನ ಮಹತ್ತರವಾಗಿದ್ದು, ವಿದ್ಯಾದಾನ ಮಾಡುತ್ತಿರುವ ಶಿಕ್ಷಕರ ವೃತ್ತಿ ಹೆಚ್ಚಿನ ಮೌಲ್ಯ ಹೊಂದಿದೆ ಎಂದರು.ಅಜ್ಞಾನದಿಂದ ಸುಜ್ಞಾನದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಮಾರ್ಗದರ್ಶನ ತೋರುವುದೇ ಶಿಕ್ಷಕರ ವೃತ್ತಿಯಾಗಿದೆ. ಪ್ರತಿಯೊಬ್ಬರೂ ಗುರುಗಳನ್ನು ಸದಾ ಸ್ಮರಿಸುತ್ತಾರೆ. ಮಕ್ಕಳ ಜೀವನ ರೂಪಿಸುವವರು ಶಿಕ್ಷಕರು ಆಗಿದ್ದಾರೆ ಎಂದರು.
ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ನೀಲಗಿರಿ ಎಂ.ತಳವಾರ್ ಮಾತನಾಡಿ, ಶಿಕ್ಷಕರ ನಿಜವಾದ ಆಸ್ತಿ ವಿದ್ಯಾರ್ಥಿಗಳು. ಮಹಾನ್ ಕಾರ್ಯ ಮಾಡುವವರು ಮಾತ್ರ ದೊಡ್ಡವರಲ್ಲ, ಮಹಾನ್ ಕಾರ್ಯ ಮಾಡಲು ಪ್ರೇರೇಪಿಸುವ ಶಿಕ್ಷಕರು ಕೂಡ ಮಹಾತ್ಮರು ಎಂದರೆ ತಪ್ಪಾಗಲಾರದು ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್‌ಪಿ ಮಹೇಶ್ ಕುಮಾರ್, ಕೂಡಿಗೆ ಡಯಟ್‌ನ ಪ್ರಾಂಶುಪಾಲ ಎಂ.ಚಂದ್ರಕಾಂತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ, ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಎಂ.ಮಹದೇವಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಗಾಯತ್ರಿ, ರಾಜ್ಯ ಸರ್ಕಾರಿ ನೌಕರರ ಕೊಡಗು ಜಿಲ್ಲಾ ಸಂಘದ ಅಧ್ಯಕ್ಷ ಪೊನ್ನಚ್ಚನ ಶ್ರೀನಿವಾಸ್, ಪದವಿ ಪೂರ್ವ ಕಾಲೇಜು ಜಿಲ್ಲಾ ಸಂಘದ ಅಧ್ಯಕ್ಷೆ ಪಿ.ಎಂ.ದೇವಕಿ, ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಫಿಲೀಪ್ ವಾಸು, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಪಿ.ಗುರುರಾಜ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಟಿ.ಸೋಮಶೇಖರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎನ್.ಮಂಜುನಾಥ್, ಅನುದಾನಿತ ಪ್ರೌಢಶಾಲಾ ಶಿಕ್ಷಕರ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭು ಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜಿಲ್ಲಾಧ್ಯಕ್ಷ ಎಚ್.ಕೆ.ಕುಮಾರ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಜಿಲ್ಲಾ ಅಧ್ಯಕ್ಷ ಪಿ.ಎ.ಪ್ರವೀಣ್, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಎ.ಸೋಮಯ್ಯ, ಪ್ರಾಥಮಿಕ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಪೂರ್ಣೇಶ್, ಎಸ್‌ಸಿಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪಾರ್ವತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಎಸ್.ರವಿಕೃಷ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮೋಹನ್ ಪೆರಾಜೆ, ಅನುದಾನಿತ ಪ್ರೌಢಶಾಲಾ ಮತ್ತು ಕಾಲೇಜು ನೌಕರರ ಸಂಘದ ಅಧ್ಯಕ್ಷ ಕೆ.ಶಿವಪ್ರಸಾದ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕಿರಣ್ ಪಿ.ಎಂ., ದೈಹಿಕ ಶಿಕ್ಷಣ ಶಿಕ್ಷಕರದ ಸಂಘದ ತಾಲೂಕು ಅಧ್ಯಕ್ಷ ಕೆ.ಜಿ.ಅಶೋಕ್ ಮತ್ತಿತರರು ಇದ್ದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಸ್ವಾಗತಿಸಿದರು. ಕುಮಾರ ನಿರೂಪಿಸಿದರು. ಶಿಕ್ಷಕಿಯರು ನಾಡಗೀತೆ ಮತ್ತು ರೈತಗೀತೆ ಹಾಡಿದರು, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ವಂದಿಸಿದರು.