ಧಾರವಾಡ: ನಿವೃತ್ತಿಯ ಬದುಕು ಅನಿಶ್ಚಿತತೆಯಲ್ಲಿ ಸಾಗಬಾರದು. ಸರ್ಕಾರಿ ನೌಕರರ ಸೇವೆಗೆ ಗೌರವ ಸಿಗಬೇಕಾದರೆ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿಯಾಗಲೇಬೇಕು. ಈ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಆಶ್ರಯದಲ್ಲಿ ನಡೆದ ಬೃಹತ್ ಪ್ರತಿಭಟನೆಯು ಸರ್ಕಾರದ ಗಮನ ಸೆಳೆಯಿತು.
ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ಭಜಂತ್ರಿ ಮಾತನಾಡಿ, ರಾಷ್ಟ್ರೀಯ ಪಿಂಚಣಿ ಯೋಜನೆಯು ನಿವೃತ್ತ ನೌಕರರಿಗೆ ಖಚಿತ ಆದಾಯ ಅಥವಾ ಸಾಮಾಜಿಕ ಭದ್ರತೆಯನ್ನು ಒದಗಿಸುವುದಿಲ್ಲ. ಸರ್ಕಾರಿ ಸೇವೆಯಲ್ಲಿ ಜೀವಮಾನವಿಡೀ ದುಡಿದ ನೌಕರರು ನಿವೃತ್ತಿಯ ನಂತರ ಗೌರವಯುತ ಬದುಕು ನಡೆಸಲು ಹಳೆಯ ಪಿಂಚಣಿ ಯೋಜನೆಯೇ ಸೂಕ್ತ ಮಾರ್ಗವಾಗಿದೆ. ಹಲವು ರಾಜ್ಯಗಳು ಈಗಾಗಲೇ ಒಪಿಎಸ್ ಅನ್ನು ಮರುಜಾರಿಗೊಳಿಸಿವೆ. ಕರ್ನಾಟಕ ಸರ್ಕಾರವೂ ನೌಕರರ ನ್ಯಾಯಸಮ್ಮತ ಬೇಡಿಕೆಗೆ ಸ್ಪಂದಿಸಿ ಹಳೆಯ ಪಿಂಚಣಿ ಯೋಜನೆಯನ್ನು ತಕ್ಷಣ ಜಾರಿಗೊಳಿಸಲು ಆಗ್ರಹಿಸಿದರು.
ರಾಜ್ಯ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ, ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಅನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಮುಖಂಡರು ನೀಡಿದರು.ಶಿಕ್ಷಕ ಮುಖಂಡರಾದ ಪ್ರಮೋದ್ ಹರಿಬಟ್ಟ, ಬಿ.ಜಿ. ಬಶೆಟ್ಟಿ, ಶ್ರೀಧರ ಗಸ್ತಿ, ಜಿ.ಆರ್. ಭಟ್, ಎನ್.ಎಸ್. ಗೋವಿಂದರೆಡ್ಡಿ, ವಿ.ಎಸ್. ಹುದ್ದಾರ, ಎನ್.ಎನ್. ಸವಣೂರ, ಆರ್.ಬಿ. ಕೊಣ್ಣೂರ, ಸಂದೀಪ ಬೂದಿಹಾಳ, ಪೀರೋಜ ಗುಡೆನಕಟ್ಟಿ , ಎಸ್.ಆರ್. ರಾಚಣ್ಣವರ, ಈಶ್ವರ ಕೊಡ್ಲಿ, ರಮೇಶ ತಳವಾರ ಇದ್ದರು.