ಸಭಾಪತಿ ಸ್ಥಾನಕ್ಕಿಂತ ಶಿಕ್ಷಕರೇ ದೊಡ್ಡವರು: ಹೊರಟ್ಟಿ

KannadaprabhaNewsNetwork |  
Published : Mar 31, 2026, 02:15 AM IST
ಧಾರವಾಡ ಜಿಲ್ಲಾ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ(ಕುಪ್ಮಾ) ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನನ್ನ ರಾಜಕೀಯ ಇತಿಹಾಸದಲ್ಲಿ ಶಿಕ್ಷಕರು ನನ್ನ ಮೇಲೆ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವೆ. ಅವರ ಏನೇ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬ‍ಳ್ಳಿ:

ಶಿಕ್ಷಕರು ನನ್ನ ಮೇಲೆ ನಂಬಿಕೆಯನ್ನಿಟ್ಟು ಸತತವಾಗಿ 8 ಬಾರಿ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ನನಗೆ ಸಭಾಪತಿ ಸ್ಥಾನ ದೊಡ್ಡದಲ್ಲ. ಆ ಸ್ಥಾನಕ್ಕೆ ನನ್ನನ್ನು ಕೂರಿಸಿದ ಶಿಕ್ಷಕರೇ ನನ್ನ ಪಾಲಿಗೆ ದೊಡ್ಡವರು. ಅವರ ಋಣ ನಾನೆಂದೂ ಮರೆಯುವುದಿಲ್ಲ ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಧಾರವಾಡ ಜಿಲ್ಲಾ ಕರ್ನಾಟಕ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿ (ಕುಪ್ಮಾ) ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನನ್ನ ರಾಜಕೀಯ ಇತಿಹಾಸದಲ್ಲಿ ಶಿಕ್ಷಕರು ನನ್ನ ಮೇಲೆ ಇಟ್ಟಿರುವ ಭರವಸೆಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುತ್ತಿರುವೆ. ಅವರ ಏನೇ ಸಮಸ್ಯೆಗಳಿದ್ದರೂ ಅವುಗಳಿಗೆ ಪರಿಹಾರ ಕೊಡಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದರು.

ಸರ್ಕಾರ ಯೋಜನೆಗಳನ್ನು ನೀಡುವುದಕ್ಕೂ ಮೊದಲು ಶಿಕ್ಷಕರು ನೆಮ್ಮದಿಯಿಂದ ಮಕ್ಕಳಿಗೆ ಪಾಠ ಮಾಡುವ ವಾತಾವರಣ ನಿರ್ಮಾಣ ಮಾಡಿಕೊಡಬೇಕಿದೆ. ಇಂದು 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಇವುಗಳ ಭರ್ತಿಗೆ ಸರ್ಕಾರ ಆದ್ಯತೆ ನೀಡಬೇಕು. ಜತೆಗೆ ಎಲ್ಲೆಡೆ ರಾಜ್ಯ ಸರ್ಕಾರ ಪಬ್ಲಿಕ್‌ ಶಾಲೆಗಳನ್ನು ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಒಂದು ಪಬ್ಲಿಕ್‌ ಶಾಲೆ ಆರಂಭವಾದಲ್ಲಿ ಸುತ್ತಮುತ್ತಲಿನ 10 ಸರ್ಕಾರಿ ಶಾಲೆಗಳು ಬೀಗ ಹಾಕಲಿವೆ. ಈ ಕುರಿತು ಸರ್ಕಾರ ಯೋಚಿಸಲಿ ಎಂದರು.

ಅತಿಥಿಗಳಾಗಿ ಆಗಮಿಸಿದ್ದ ಕುಪ್ಮಾ ರಾಜ್ಯ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವಾ ಮಾತನಾಡಿ, ಎಲ್ಲ ರಂಗಗಳಲ್ಲೂ ಸರ್ಕಾರಿ, ಸರ್ಕಾರೇತರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ಏಳ್ಗೆ, ಅಭಿವೃದ್ಧಿಗೆ ಎರಡೂ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ. ಆದರೆ, ಸರ್ಕಾರವು ಸರ್ಕಾರೇತರ ಸಂಘಟನೆಗಳನ್ನು ಓರೆ ಕಣ್ಣಿನಿಂದ ನೋಡುತ್ತಿರುವುದು ನೋವಿನ ಸಂಗತಿ. ರಾಜ್ಯದಲ್ಲಿ 6500ಕ್ಕೂ ಅಧಿಕ ಪದವಿ ಪೂರ್ವ ಕಾಲೇಜುಗಳಿವೆ. ಅವುಗಳಲ್ಲಿ ಶೇ. 60ರಷ್ಟು ಅನುದಾನ ರಹಿತ ಕಾಲೇಜುಗಳಿವೆ. ಆದರೆ, ಸರ್ಕಾರ ಮಾತ್ರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಪ್ಪು ಕನ್ನಡಕದಲ್ಲಿ ನೋಡುತ್ತಿದೆ. ಈ ಧೋರಣೆ ಬದಲಾಗಬೇಕಿದೆ. ನಮ್ಮನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವಾಗಬೇಕಿದೆ. ಸಂಘಟನೆಗಳು ಗಟ್ಟಿಯಾಗಿ ನಿಂತು ಶಿಕ್ಷಕರ ಸಮಸ್ಯೆಗೆ ಸ್ಪಂದಿಬೇಕು. ಹಾಗೆಯೇ ಈ ಸಂಘಟನೆಯಲ್ಲಿ ರಾಜ್ಯದಲ್ಲಿರುವ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳುವ ಮೂಲಕ ಸಂಘಟನೆ ಬಲಪಡಿಸುವಂತೆ ಮನವಿ ಮಾಡಿದರು.

ಕುಪ್ಮಾ ರಾಜ್ಯ ಸಮಿತಿ ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್‌. ನಾಯಕ ಮಾತನಾಡಿದರು. ಕುಪ್ಮಾ ಧಾರವಾಡದ ಅಧ್ಯಕ್ಷ ಡಾ. ವಿಶ್ವನಾಥ ಕೊರವಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಧಾರವಾಡ ಡಿಡಿಪಿಯು ತೇಜಸ್ವಿನಿ ನಾರಾಯಣಕರ, ಕುಪ್ಮಾ ಕಾರ್ಯದರ್ಶಿ ಅನಿಲಕುಮಾರ ಚೌಗಲಾ, ಪ್ರಧಾನ ಕಾರ್ಯದರ್ಶಿ ನಾಗೇಶ ಅಣ್ಣಿಗೇರಿ, ಗೌರವಾಧ್ಯಕ್ಷ ಜಿ.ವಿ. ವಳಸಂಗ, ಪಿ.ಆರ್‌. ಹಂಚಿಮನಿ, ಮಲ್ಲಿಕಾರ್ಜುನ ಸಾವುಕಾರ, ಅಶ್ರಫಅಲಿ ಬಶೀರಅಹ್ಮದ್, ಬಸವರಾಜ ಕೊಣ್ಣೂರ, ಉಪಾಧ್ಯಕ್ಷ ವಸಂತ ಹೊರಟ್ಟಿ, ಡಾ. ವೀಣಾ ಬಿರಾದಾರ, ಸವಿತಾ ಅಮರಶೆಟ್ಟಿ, ಖಜಾಂಚಿ ನೂರಅಹ್ಮದ ಧಾರವಾಡ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವಮಾನದ ಕಲಾಶ್ರೇಷ್ಠ ಸಾಧಕರ ಪ್ರಶಸ್ತಿಗೆ ನಾಡೋಜ ಡಾ.ವಿ.ಟಿ. ಕಾಳೆ ಆಯ್ಕೆ
ಸಾಂಸ್ಕೃತಿಕ ಪರಂಪರೆ ಉಳಿಸಿಕೊಳ್ಳಲು ರಂಗಭೂಮಿ ಸಹಕಾರಿ: ಜೆ. ನರಸಿಂಹಮೂರ್ತಿ