ಬಳ್ಳಾರಿ: ವಿಜ್ಞಾನದ ಅನೇಕ ಕೌತುಕ ಸಂಗತಿಗಳ ಬಗ್ಗೆ ಶಿಕ್ಷಕರು ಮಕ್ಕಳಲ್ಲಿ ಆಸಕ್ತಿ ತರಿಸಬೇಕು. ಬರೀ ಪಠ್ಯದ ವಿಷಯಗಳನ್ನಷ್ಟೇ ಬೋಧಿಸಲು ಶಿಕ್ಷಕರ ಅಗತ್ಯವಿಲ್ಲ ಎಂದು ಕುಂದಾಪುರದ ವಿಜ್ಞಾನ ಲೇಖಕ, ನಿವೃತ್ತ ಡಿಡಿಪಿಐ ಎಚ್.ದಿವಾಕರ ಶೆಟ್ಟಿ ಹೇಳಿದರು.
ವಿಜ್ಞಾನ ಎಂದರೆ ಮಕ್ಕಳಲ್ಲಿ ಆಸಕ್ತಿ ಬದಲು ಭಯ ಬರುವಂತೆ ಮಾಡಿ ಬಿಟ್ಟಿದ್ದೇವೆ. ವಿಜ್ಞಾನ ಎಂದರೆ ಬದುಕಿನ ಕಲಿಕೆ. ಅದು ಎಂದೂ ನಿಲ್ಲಬಾರದು. ವಿಜ್ಞಾನ ಶೋಧನೆಗೆ ಎಲ್ಲೂ ಹುಡುಕಿಕೊಂಡು ಹೋಗಬೇಕಾಗಿಲ್ಲ. ದೊಡ್ಡ ದೊಡ್ಡ ಲ್ಯಾಬ್‌ಗಳು ಅಗತ್ಯವಿಲ್ಲ. ಅಪ್ಪನ ತೋಟ, ಅಮ್ಮನ ಅಡುಗೆ ಮನೆಯೇ ದೊಡ್ಡ ಲ್ಯಾಬ್‌ಗಳು. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ತೋಟದ ಮನೆ, ಅಡುಗೆ ಮನೆಯಲ್ಲಿಯೇ ಸಿಗುತ್ತವೆ. ಸಣ್ಣಪುಟ್ಟ ಪರಿಕರಗಳನ್ನು ಬಳಸಿಕೊಂಡು ವಿಜ್ಞಾನದ ರಹಸ್ಯ ಅರಿಯಬೇಕು. ಶಿಕ್ಷಕರಾದವರು ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡಿದರೆ ಸಾಕು; ಬಳಿಕ ಅವರೇ ಜ್ಞಾನ-ವಿಜ್ಞಾನದ ದಾರಿ ಕಂಡುಕೊಳ್ಳುತ್ತಾರೆ ಎಂದರು.
ವಿಜ್ಞಾನದಂಗಳ ಕೃತಿಯಲ್ಲಿನ ಲೇಖನಗಳು ಹಾಗೂ ಅನೇಕ ಕೌತುಕ ಸಂಗತಿಗಳ ಕುರಿತು ಪ್ರಾಸ್ತಾಪಿಸಿದ ಎಚ್.ದಿವಾಕರ ಶೆಟ್ಟಿ, ಉಪನ್ಯಾಸಕ ಡಾ.ಯು. ಶ್ರೀನಿವಾಸಮೂರ್ತಿ ಶಾಲಾ ಮಕ್ಕಳ ವಿಜ್ಞಾನ ಪ್ರಯೋಗಗಳು, ಲೇಖನಗಳನ್ನಾಧರಿಸಿದ ವಿಜ್ಞಾನದಂಗಳ ಕೃತಿ ಉಪಯುಕ್ತವಾಗಿದೆ. ವಿಜ್ಞಾನ ಸಂಗತಿಗಳನ್ನು ಸಂಕೀರ್ಣಗೊಳಿಸದೇ ಸರಳವಾಗಿ ತಿಳಿಸಲಾಗಿದೆ ಎಂದರು.ಲೇಖಕ ಡಾ.ಯು.ಶ್ರೀನಿವಾಸಮೂರ್ತಿ ಮಾತನಾಡಿ, ವಿಜ್ಞಾನದ ಆಸಕ್ತಿ ವೈಚಾರಿಕತೆ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಯೋಚನಾ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ. ಜನಸಾಮಾನ್ಯರಿಗೆ ವಿಜ್ಞಾನದ ಮಾಹಿತಿ ಅಗತ್ಯವಿದೆ. ವಿಜ್ಞಾನ ಹಾಗೂ ಆಧ್ಯಾತ್ಮಕ್ಕೂ ಸಂಬಂಧವಿದೆ. ವಿಜ್ಞಾನ ಅರಿತರೆ ಆಧ್ಯಾತ್ಮದ ಅರಿವಾಗುತ್ತದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಶರಣ ಬಸವನಗೌಡ, ಪ್ರಾಂಶುಪಾಲ ಡಾ.ಸತೀಶ್ ಎ.ಹಿರೇಮಠ, ವಿಚಾರವಾದಿ ಎಚ್.ಆದಿನಾರಾಯಣ ರೆಡ್ಡಿ ದೊಡ್ಡಹರಿವಾಣ ಅವರು ಮಾತನಾಡಿದರು.ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಬಿ.ಸುಲೇಖಾ, ವೀವಿ ಸಂಘದ ನೌಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕರಕಡಲ್ ವೀರೇಶ್, ಕಸಾಪ ಮಾಜಿ ಅಧ್ಯಕ್ಷ ಹಂಪನಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕೋಶಾಧ್ಯಕ್ಷ ಡಾ.ಬಸವರಾಜ ಗದುಗಿನ, ಬಿಸಿಲಹಳ್ಳಿ ಬಸವರಾಜ ಹಾಗೂ ಚಂದ್ರಶೇಖರ್ ಆಚಾರ್ ಕಪ್ಪಗಲ್ ಉಪಸ್ಥಿತರಿದ್ದರು. ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು ಕಾರ್ಯಕ್ರಮ ನಿರ್ವಹಿಸಿದರು.
ಅ.ಭಾ.ಕ.ಸಾ.ಸಮ್ಮೇಳನ ಬಳ್ಳಾರಿಯಲ್ಲಾಗಲಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಜರುಗುವಂತಾಗಲಿ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಯಶ್ವಂತರಾಜ್ ನಾಗರೆಡ್ಡಿ ಆಶಿಸಿದರು.
ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಸಾಪ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಅಖಿಲ ಭಾರತ ಸಮ್ಮೇಳನ ತಂದರೆ ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಗತ್ಯ ಸಹಕಾರ ನೀಡಲಿದೆ. ಕನ್ನಡದ ಎಲ್ಲ ಕಾರ್ಯಕ್ರಮಗಳಿಗೂ ಸಂಸ್ಥೆ ನೆರವಾಗಲಿದೆ ಎಂದು ಹೇಳಿದರು.