ಕಾರವಾರ: ದೇಶದ ಅಭಿವೃದ್ಧಿ ರಾಜಕಾರಣಿಗಳಿಂದ, ಬೇರೆ ಬೇರೆ ವ್ಯವಸ್ಥೆಯಿಂದ ಆಗಿದೆ ಎಂದು ಅಂದುಕೊಂಡಿದ್ದರೆ ಅದು ತಪ್ಪು. ದೇಶದ ಅಭಿವೃದ್ಧಿಗೆ ನಿಜವಾಗಿಯೂ ಕಾರಣರಾದವರು ಶಿಕ್ಷಕರು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.
ಜಿಲ್ಲೆಯಲ್ಲಿ ತಮ್ಮ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ. ಮುಂದೆ ಕೂಡ ಶಿಕ್ಷಣ ಕ್ಷೇತ್ರಕ್ಕೆ ಪ್ರಥಮ ಆದ್ಯತೆ ಕೊಡುತ್ತೇನೆ. ಶಿಕ್ಷಕರ ಸಲಹೆ, ಸೂಚನೆ ಮಾರ್ಗದರ್ಶನ ಸದಾ ಬೇಕು. ದೇಶ, ರಾಜ್ಯ, ಊರು ಸಮೃದ್ಧಿಯಾಗಿ ಬೆಳೆಯಲು ಶಿಕ್ಷಕರು ಕಾರಣ. ನಾವು ಇಂದು ಇಷ್ಟು ಎತ್ತರಕ್ಕೆ ಬೆಳೆಯಲು, ಇಲ್ಲಿ ನಿಂತು ಮಾತನಾಡಲು ಶಿಕ್ಷಕರೆ ಕಾರಣರಾಗಿದ್ದಾರೆ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಸಮಾಜದಲ್ಲಿ ಶಿಕ್ಷಕರಿಗೆ ಬಹು ದೊಡ್ಡ ಜವಾಬ್ದಾರಿ ಇದೆ. ಮಕ್ಕಳು ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವ ರೀತಿ ಅವರನ್ನು ವಿದ್ಯಾಭ್ಯಾಸದ ಸಮಯದಲ್ಲೇ ಶಿಕ್ಷಕರು ಮಾರ್ಪಡಿಸಬೇಕು. ಯಾವುದೇ ಸಮಸ್ಯೆಗಳನ್ನು ಎದುರಿಸುವ ರೀತಿಯಲ್ಲಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುವಂತಾಗಬೇಕು. ಮಕ್ಕಳು ಪಾಲಕರಿಗಿಂತ ಶಿಕ್ಷಕರ ಮಾತನ್ನು ತಪ್ಪದೇ ಪಾಲಿಸುತ್ತಾರೆ. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪ್ರಾರಂಭದಲ್ಲಿಯೇ ಸಂಸ್ಕಾರಯುತ ವಿದ್ಯಾರ್ಥಿಗಳಾದರೆ ಮುಂದೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.ಪಪಂ ಅಧ್ಯಕ್ಷ ನಾಗರಾಜ್ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ಡಯಟ್‌ನ ಉಪನಿರ್ದೇಶಕ ಜಿ.ಎಸ್. ಭಟ್ಟ, ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ, ತಹಸೀಲ್ದಾರ್ ರವಿರಾಜ್ ದೀಕ್ಷಿತ್, ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮತ್ತಿತರರು ಇದ್ದರು.ಕಾರವಾರ ಶೈಕ್ಷಣಿಕ ಜಿಲ್ಲೆಯ ಜಿಲ್ಲಾ ಮಟ್ಟದ ಅತ್ತ್ಯುತ್ತಮ ಪ್ರಶಸ್ತಿ ಪಡೆದ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಕರಿಗೆ, ನಿವೃತ್ತ ಶಿಕ್ಷಕರಿಗೆ ಮತ್ತು ಕಳೆದ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು. ಡಿಡಿಪಿಐ ಲತಾ ನಾಯ್ಕ ಸ್ವಾಗತಿಸಿದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ. ನಾಯ್ಕ್ ವಂದಿಸಿದರು. ಸಹ ಶಿಕ್ಷಕರರಾದ ಸುದೇಶ್ ನಾಯ್ಕ ಹಾಗೂ ಪ್ರಕಾಶ್ ನಾಯ್ಕ್ ನಿರೂಪಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ, ಲಯನ್ಸ್ ಕ್ಲಬ್ ಹೊನ್ನಾವರ ಇವರ ಆಶ್ರಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.