ಯೋಜನೆಗಳು ಜನರಿಗೆ ಮುಟ್ಟಲು ಶಿಕ್ಷಕರೇ ಕಾರಣ: ಎಸಿ ವೀರೇಶಕುಮಾರ್‌

KannadaprabhaNewsNetwork |  
Published : Sep 07, 2026, 01:30 AM IST
ಶಿಕ್ಷಕರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಶಿಕ್ಷಕರು ಮಕ್ಕಳಿಗೆ ಜ್ಞಾನ ಧಾರೆ ಎರೆಯುವುದರ ಜತೆಗೆ ಇವತ್ತಿನ ಸಂದರ್ಭ ಸರ್ಕಾರದ ಅನೇಕ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ, ಅದರ ಯಶಸ್ಸಿಗೆ ಕಾರಣರಾಗುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ವೀರೇಶಕುಮಾರ್ ಶಿಕ್ಷಕರ ಸೇವೆಯ ಬಗ್ಗೆ ಶ್ಲಾಘಿಸಿದರು.

ಕನ್ನಡಪ್ರಭ ವಾರ್ತೆ ಸಾಗರ

ಶಿಕ್ಷಕರು ಮಕ್ಕಳಿಗೆ ಜ್ಞಾನ ಧಾರೆ ಎರೆಯುವುದರ ಜತೆಗೆ ಇವತ್ತಿನ ಸಂದರ್ಭ ಸರ್ಕಾರದ ಅನೇಕ ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸಿ, ಅದರ ಯಶಸ್ಸಿಗೆ ಕಾರಣರಾಗುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ವೀರೇಶಕುಮಾರ್ ಶಿಕ್ಷಕರ ಸೇವೆಯ ಬಗ್ಗೆ ಶ್ಲಾಘಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕ ದಿನಾಚರಣೆ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಿಕ್ಷಕ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಸರ್ಕಾರ ಅನೇಕ ಕಾರ್ಯಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುವುದರ ಹಿಂದೆ ನಿಸ್ವಾರ್ಥ ಮತ್ತು ಪ್ರಾಮಾಣಿಕತೆ ಅಡಗಿದೆ. ತಾಲೂಕಿನಲ್ಲಿ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಮಕ್ಕಳ ಏಳಿಗೆಗೆ ಅವಿರತ ಶ್ರಮಿಸುತ್ತಿರುವುದು ಅಭಿನಂದನಾರ್ಹ ಸಂಗತಿ ಎಂದರು.ತಹಸೀಲ್ದಾರ್ ಡಾ. ಪ್ರತಿಭಾ ಆರ್. ಮಾತನಾಡಿ, ಮಕ್ಕಳನ್ನು ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನ ಕಡೆ ಕರೆದೊಯ್ಯುವ ಶಿಕ್ಷಕರು ಪೂಜ್ಯ ಸ್ಥಾನದಲ್ಲಿರುತ್ತಾರೆ. ಎಷ್ಟೇ ಆಧುನಿಕತೆ ಬಂದರೂ ಶಿಕ್ಷಕರು ನೀಡುತ್ತಿರುವ ಸೇವೆಗೆ ಅವುಗಳು ಯಾವತ್ತೂ ಪರ್ಯಾಯವಾಗಲು ಸಾಧ್ಯವಿಲ್ಲ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶಪ್ಪ ಮಾತನಾಡಿ, ಒತ್ತಡದ ನಡುವೆಯೂ ಶಿಕ್ಷಕರು ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅರ್ಥಪೂರ್ಣ ಬದುಕು ಕಟ್ಟಿಕೊಡಲು ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಣದ ಮೂಲಕ ಮಕ್ಕಳಿಗೆ ಹಾಕುವ ಅಡಿಪಾಯ ಮುಖ್ಯವಾಗಿದೆ. ನಿವೃತ್ತರಾದ ಶಿಕ್ಷಕರು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ನಿವೃತ್ತ ಪ್ರಾಧ್ಯಾಪಕ ಪ್ರೊ. ಪಂಚಾಕ್ಷರಯ್ಯ ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಶಿಕ್ಷಕರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರು, ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು ಅಭಿನಂದಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ, ಪ್ರಮುಖರಾದ ಓಂಕಾರಪ್ಪ, ಲಕ್ಷ್ಮಣ ನಾಯ್ಕ್, ಸುಬ್ರಹ್ಮಣ್ಯ, ವಿಕ್ಟೋರಿಯಾ ಫರ್ನಾಂಡಿಸ್, ವಿ.ಟಿ.ಸ್ವಾಮಿ, ಡಾ.ಅನ್ನಪೂರ್ಣ, ಪಾಲಾಕ್ಷಪ್ಪ ಎಸ್.ಎನ್. ಇನ್ನಿತರರು ಹಾಜರಿದ್ದರು.ಶಾಸಕ ಗೈರು: ಉದ್ಘಾಟನೆ ವಿಳಂಬ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಬೇಕಿತ್ತು. ಆದರೆ ಕಾರ್ಯಕ್ರಮ ಕೊನೆ ಹಂತ ತಲುಪುವವರೆಗೂ ಶಾಸಕರು ಆಗಮಿಸದಿರುವುದರಿಂದ ಉದ್ಘಾಟನೆಗೆ ಕಾಯದೆ ಸನ್ಮಾನ, ವಿಶೇಷ ಉಪನ್ಯಾಸವನ್ನೂ ಮುಗಿಸಲಾಯಿತು. ಸಂಘಟಕರು ಅನಿವಾರ್ಯವಾಗಿ ಉಪವಿಭಾಗಾಧಿಕಾರಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದರು. ಶಾಸಕರಿಗಾಗಿ ಕಾಯ್ದ ಪರಿಣಾಮ ಕಾರ್ಯಕ್ರಮ ಮೊದಲು ಉದ್ಘಾಟನೆಯಾಗುವ ಬದಲು ಕೊನೆಗೆ ಉದ್ಘಾಟನೆಯಾದ ವಿಲಕ್ಷಣ ಕ್ರಮಕ್ಕೆ ಸಾಕ್ಷಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನಾಚರಣೆಗೆ ಗೈರಾದ ಶಾಸಕರು ಶಿಕ್ಷಕರಲ್ಲಿ ಕ್ಷಮೆಯಾಚನೆಗೆ ಆಗ್ರಹ: ರತ್ನಾಕರ
ಗ್ರಾಮೀಣ ಮಕ್ಕಳಿಗೂ ಇಂಗ್ಲಿಷ್ ಶಿಕ್ಷಣ ಸಿಗಲಿ: ಸುನಿಲ್‌ಗೌಡ