ಹುಬ್ಬಳ್ಳಿ:
ಸಾವಿರಾರು ಕೋಟಿ ಹಗರಣದ ರೂವಾರಿ ಶಿವಾನಂದ ನೀಲಣ್ಣವರ ಎಂಬುವನನ್ನು ಬೆಳಗಾವಿ ಪೊಲೀಸರು ಬರೀ ವಿಡಿಯೋ ಆಧಾರದಲ್ಲಿ ಬಂಧಿಸಿ ಜೈಲಿಗಟ್ಟಿದ್ದರೆ, ಹುಬ್ಬಳ್ಳಿ ಪೊಲೀಸರು ವಂಚನೆಗೆ ಒಳಗಾದ ನಾಲ್ಕಾರು ಶಿಕ್ಷಕಿಯರು ದಾಖಲೆ ಸಮೇತ ದೂರು ನೀಡಲು ಬಂದರೂ ಕ್ಯಾರೇ ಎನ್ನುತ್ತಿಲ್ಲ.
ಈ ಹಗರಣ ಬೆಳಕಿಗೆ ಬಂದೊಡನೆಯೇ ಬೆಳಗಾವಿ ಪೊಲೀಸರಂತೆ ಹುಬ್ಬಳ್ಳಿಯವರೂ ಸ್ವಯಂ ಪ್ರೇರಿತರಾಗಿ ಎಫ್‌ಐಆರ್ ದಾಖಲಿಸಿಕೊಳ್ಳಬೇಕಿತ್ತು. ದಾಖಲೆ ಸಮೇತ ದೂರು ನೀಡಲು ಬಂದರೂ ಮೀಣಾಮೇಷ ಎನಿಸುತ್ತಿರುವ ಕಸಬಾಪೇಟೆ ಪೊಲೀಸರ ಬಗ್ಗೆ ನಗರದಲ್ಲಿ ಆಕ್ರೋಶ ಕೇಳಿ ಬರುತ್ತಿದೆ.ಆಗಿರುವುದೇನು?:
ಹುಬ್ಬಳ್ಳಿ ಕೇಂದ್ರವನ್ನಾಗಿಟ್ಟುಕೊಂಡು ಉತ್ತರ ಕರ್ನಾಟಕದ ಜಿಲ್ಲೆಗಳಷ್ಟೇ ಅಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಶಿಕ್ಷಕರಿಂದ ಹೂಡಿಕೆ ಮಾಡಿಸಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತೇವೆ. 3 ವರ್ಷದಲ್ಲೇ ದುಪ್ಪಟ್ಟು ಹಣ ಪಡೆಯಬಹುದು ಎಂದು ನಂಬಿಸಿದ್ದರು. ಚಿಕ್ಕೋಡಿ ಮೂಲದ ವ್ಯಕ್ತಿ ಹಾಗೂ ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ವ್ಯಕ್ತಿಗಳಿಗೆ ಈ ದುಡ್ಡು ಹಾಕಿಸಲಾಗಿತ್ತು.
ಇತ್ತೀಚಿಗೆ ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಪ್ರಕರಣ ಹೊರಬೀಳುತ್ತಿದ್ದಂತೆ ಶಿಕ್ಷಕ ವಲಯಕ್ಕೆ ವಂಚಿಸಿದ ಪ್ರಕರಣ ಕೂಡ ಮತ್ತೆ ಚರ್ಚೆಗೆ ಬಂದಿತ್ತು. ಕನ್ನಡಪ್ರಭಕ್ಕೆ ದಾಖಲೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ದೋಖಾ ಎಂಬ ವರದಿಯನ್ನೂ ಪ್ರಕಟಿಸಿತ್ತು. ಇದೀಗ ಶಿಕ್ಷಕರು ಧೈರ್ಯ ಮಾಡಿ ಬೇರೆ ಬೇರೆ ಊರುಗಳಿಂದ ದಾಖಲೆಗಳ ಮೂಟೆಯನ್ನು ಹೊತ್ತುಕೊಂಡು ಹುಬ್ಬಳ್ಳಿ ಕಸಬಾಪೇಟೆ ಠಾಣೆಗೆ ಪ್ರಕರಣ ದಾಖಲಿಸಲು ಬುಧವಾರ ಬಂದಿದ್ದರು.
ಈ ಶಿಕ್ಷಕಿಯರು ಮೊದಲು ವಿದ್ಯಾನಗರ ಠಾಣೆಗೆ ಹೋಗಿದ್ದಾರೆ. ಅವರು ಉಪನಗರ ಠಾಣೆಗೆ ಕಳಿಸಿದ್ದಾರೆ. ಅಲ್ಲಿ ಹೋದರೆ ಇದು ದೊಡ್ಡ ಹಗರಣ ನೀವು ಕಮೀಶ್ನರೇಟ್‌ಗೆ ಹೋಗಿ ಎಂದು ಕಳಿಸಿದ್ದಾರೆ. ಕಮೀಶ್ನರೇಟ್ ಸಿಬ್ಬಂದಿ ಕಸಬಾಪೇಟೇ ಠಾಣೆಗೆ ಕಳಿಸಿದ್ದಾರೆ.
ಕೋಟಿಗಟ್ಟಲೇ ಅವ್ಯವಹಾರ ನಡೆದರೂ ಹಿಡಿದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕಾದ ಪೊಲೀಸರೇ ಮೀನಾಮೇಷ ಎಣಿಸುತ್ತಿರುವುದು ಶಿಕ್ಷಕ ವಲಯದಲ್ಲಿ ಆಕ್ರೋಶವನ್ನುಂಟು ಮಾಡಿದೆ. ಇದೀಗ ಪೊಲೀಸರ ವಿರುದ್ಧವೇ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಶಿಕ್ಷಕರು ನೀಡಿದ್ದಾರೆ.