ಶಿಕ್ಷಕರಿಗೆ ಮೊಟ್ಟೆ ದರ ಏರಿಕೆ ಬಿಸಿ!

KannadaprabhaNewsNetwork |  
Published : Jul 03, 2026, 02:15 AM IST
ಶಾಲೆಯಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ ಸವಿಯುತ್ತಿರುವ ವಿದ್ಯಾರ್ಥಿಗಳು. | Kannada Prabha

ಸಾರಾಂಶ

ಬಿಸಿಯೂಟ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುತ್ತಿದ್ದು ಸರ್ಕಾರ ಒಂದು ಮೊಟ್ಟೆಗೆ ₹6 ದರ ನೀಡಿದರೆ ಮಾರುಕಟ್ಟೆಯಲ್ಲಿ ಪ್ರಸ್ತುತ ₹ 8ಕ್ಕೆ ಮಾರಾಟವಾಗುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೊಟ್ಟೆ ವಿತರಣೆ ಈಗ ರಾಜ್ಯದ 47000ಕ್ಕೂ ಅಧಿಕ ಪ್ರಾಥಮಿಕ, ಪ್ರೌಢಶಾಲೆಗಳ ಶಿಕ್ಷಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸರ್ಕಾರ ನಿಗದಿಗೊಳಿಸಿದ ದರಕ್ಕಿಂತ ಪ್ರತಿ ಮೊಟ್ಟೆಗೆ ₹ 2 ಹೆಚ್ಚುವರಿ ಹಣ ನೀಡಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

ಬಿಸಿಯೂಟ ಯೋಜನೆಯಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುತ್ತಿದ್ದು ಸರ್ಕಾರ ಒಂದು ಮೊಟ್ಟೆಗೆ ₹6 ದರ ನೀಡಿದರೆ ಮಾರುಕಟ್ಟೆಯಲ್ಲಿ ಪ್ರಸ್ತುತ ₹ 8ಕ್ಕೆ ಮಾರಾಟವಾಗುತ್ತಿದೆ.

ಆಗದ ದರ ಪರಿಷ್ಕರಣೆ:

2024ರಿಂದ ಶಾಲೆಗಳಿಗೆ ಸರ್ಕಾರ 1 ಮೊಟ್ಟೆಗೆ ₹ 6 ನೀಡುತ್ತಿದ್ದರೂ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಿಲ್ಲ. ಆದರೆ, ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದ್ದು ಅದರ ಭಾರ ಮುಖ್ಯಶಿಕ್ಷಕರ ಬೇಬಿಗೆ ಬೀಳುತ್ತಿದೆ.

ಪ್ರತಿ ಶಾಲೆಗೆ ₹ 10 ಸಾವಿರ ಹೊರೆ:

ವಾರದ 6 ದಿನ ಮಕ್ಕಳಿಗೆ ಮೊಟ್ಟೆ ವಿತರಿಸುತ್ತಿರುವುದರಿಂದ ಬಹುತೇಕ ಶಾಲೆಗಳಿಗೂ ತಲಾ ₹ 8ರಿಂದ ₹10 ಸಾವಿರ ಹೆಚ್ಚುವರಿ ಹೊರೆಯಾಗುತ್ತಿದೆ. ಇದು ಮಕ್ಕಳ ಹಾಜರಾತಿಗೆ ತಕ್ಕಂತೆ ಏರುಪೇರಾಗಲಿದೆ. ಕೆಲವು ಶಾಲೆಗಳಲ್ಲಿ ವಾರದ 6 ದಿನದ ಬದಲು 5, 4 ದಿನ ಮಾತ್ರ ಮೊಟ್ಟೆ ನೀಡುವ ಮೂಲಕ ಹೆಚ್ಚುವರಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪಾಲಕರ ಅಪಸ್ವರ ಕೇಳಿಬರುತ್ತಿದೆ. ಮಕ್ಕಳು ಮೊಟ್ಟೆ ತಿನ್ನುವಂತೆ ಎನ್‌ಜಿಒ ಮೂಲಕ ಶಾಲೆಯಲ್ಲಿ ಜಾಗೃತಿ ಮೂಡಿಸುವ ಸರ್ಕಾರ ಬೆಲೆ ಪರಿಷ್ಕರಿಸಿ ಅನುದಾನ ನೀಡುತ್ತಿಲ್ಲ ಎಂಬುದು ಮುಖ್ಯೋಪಾಧ್ಯಾಯರ ಪ್ರಶ್ನೆ.

ಸಿಎಂಗೆ ಮನವಿ:

ಜೂ. 17ರಂದು ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಬೆಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಈ ಸಮಸ್ಯೆ ಕುರಿತು ಚರ್ಚಿಸಿದ್ದು ಅಂದು ಶಿಕ್ಷಕರ ನಿಯೋಗವು ಮುಖ್ಯಮಂತ್ರಿ ಭೇಟಿ ಮಾಡಿ ನಿತ್ಯ ಮಾರುಕಟ್ಟೆ ದರದ ಆಧಾರದಲ್ಲಿ ಮೊಟ್ಟೆ ದರ ನಿಗದಿಗೊಳಿಸುವಂತೆ, ಇಲ್ಲವೇ ಮೊಟ್ಟೆ ಪೂರೈಕೆಗೆ ಖಾಸಗಿ ಏಜನ್ಸಿಗೆ ನೀಡುವಂತೆ ಮನವಿ ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಸಹ ದರ ಪರಿಷ್ಕರಣೆ ಕುರಿತು ಸಮ್ಮತಿ ಸೂಚಿಸಿದ್ದಾರೆ. ಆದರೆ, ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಪ್ರತಿ ಮೊಟ್ಟೆಗೆ ₹2 ಹೆಚ್ಚುವರಿ ಹೊರೆ

ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಪ್ರಾಥಮಿಕ, 7 ಸಾವಿರಕ್ಕೂ ಅಧಿಕ ಪ್ರೌಢಶಾಲೆಗಳಲ್ಲಿ ವಾರದ 6 ದಿನ ಮಕ್ಕಳಿಗೆ ಮೊಟ್ಟೆ, ಇಲ್ಲವೇ ಬಾಳೆಹಣ್ಣು ನೀಡಲಾಗುತ್ತಿದೆ. ಒಂದು ಮೊಟ್ಟೆ ಖರೀದಿಗೆ ₹5, ಮೊಟ್ಟೆ ಬೇಯಿಸಲು ಇಂಧನ ವೆಚ್ಚಕ್ಕೆ ₹ 50 ಪೈಸೆ, ಮೊಟ್ಟೆ ಬೇಯಿಸಿ ಸುಲಿಯುವ ಕೂಲಿ ವೆಚ್ಚ ₹ 30 ಪೈಸೆ, ಸಾಗಾಣಿಕಾ ವೆಚ್ಚಕ್ಕಾಗಿ ₹ 20 ಪೈಸೆ ನಿಗದಿಗೊಳಿಸಿ ಒಟ್ಟು ಪ್ರತಿ ಮೊಟ್ಟೆಗೆ ₹ 6 ನೀಡಲಾಗುತ್ತಿದೆ. ಆದರೆ, ಪ್ರಸ್ತುತ ₹ 7ಕ್ಕೆ ಒಂದು ಮೊಟ್ಟೆ ಸಿಗುತ್ತಿದೆ. ಇದರೊಂದಿಗೆ ಸಾಗಾಣಿಕೆ, ಬೇಯಿಸಲು ಹಾಗೂ ಸುಲಿಯಲು ಸೇರಿ ₹ 1 ನೀಡಬೇಕಿದೆ. ಇದರಿಂದಾಗಿ ಪ್ರತಿ ಮೊಟ್ಟೆಗೆ ₹ 2 ಹೊರೆಯಾಗುತ್ತಿದೆ.ಮೊಟ್ಟೆ ದರ ಏರಿಕೆಯಿಂದಾಗಿ ಪ್ರತಿ ಶಾಲೆಗಳಲ್ಲಿ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿದೆ. ಇದನ್ನು ಸರಿದೂಗಿಸುವುದೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಸರ್ಕಾರ ಆದಷ್ಟು ಬೇಗನೆ ಮೊಟ್ಟೆ ದರ ಪರಿಷ್ಕರಣೆ ಮಾಡಿ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆ ಮಾಡಲಿ.

ವಿ.ಎಫ್‌. ಚುಳಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರ್ಹರು ಮತದಾರ ಪಟ್ಟಿಯಲ್ಲಿ ಉಳಿಯಲಿ
ಫ.ಗು.ಹಳಕಟ್ಟಿಯಿಂದ ವಚನಗಳಿಗೆ ಶಾಶ್ವತ ಅಸ್ತಿತ್ವ