ಕನ್ನಡಪ್ರಭ ವಾರ್ತೆ ನಾಗಮಂಗಲ
ದೇಶದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪ್ರಗತಿಯಲ್ಲಿ ಗುರುವಿನ ಪಾತ್ರ ಬಹುಮುಖ್ಯ. ನಮ್ಮಲ್ಲಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನೆಡೆಗೆ ಕೊಂಡೊಯ್ದು, ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಶ್ರೀಧರ್ ಅಭಿಪ್ರಾಯಪಟ್ಟರು.ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅತ್ಯುತ್ತಮ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿ, ಗುರು ಎಂಬ ಪದವೇ ರೋಮಾಂಚನ. ಮಕ್ಕಳಿಗೆ ಅಕ್ಷರ ಕಲಿಸುವುದಷ್ಟೆ ಅಲ್ಲ. ಜೀವನದಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಶಕ್ತಿಯನ್ನು ನೀಡುತ್ತಾರೆ ಎಂದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಪ್ರಸಿದ್ಧ ತತ್ವಜ್ಞಾನಿ ಮತ್ತು ಶಿಕ್ಷಣ ತಜ್ಞರೂ ಆಗಿದ್ದರು. ಅವರು ದೇಶ ಮತ್ತು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡಿದರು. ಭಾರತದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸುವ ಸಲುವಾಗಿ ಅವರ ಹುಟ್ಟುಹಬ್ಬದ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಶಿಕ್ಷಕ ವೃತ್ತಿ ಹೆಮ್ಮೆ ಪಡುವ ವಿಷಯ, ನಮಗೆ ವಿದ್ಯೆ ಕಲಿಸಿ ವಿಶ್ವಮಾನವರನ್ನಾಗಿ ರೂಪಿಸುವ ಶಕ್ತಿ ಇದೆ ಎಂದರೆ ಅದು ಶಿಕ್ಷಕರಿಗೆ ಮಾತ್ರ. ನಮ್ಮ ಶಾಲಾ ದಿನಗಳ ಗುರುಗಳನ್ನು ನೆನಪಿಸಿಕೊಂಡರೆ ಅವರು ನೀಡಿದ ಶಿಕ್ಷಣ ಜೀವನ ಪರ್ಯಂತ ನೆನಪಿನಲ್ಲಿರುತ್ತದೆ ಎಂದರು.
ಬಿಜಿಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎನ್.ಶೋಭಾ ಮಾತನಾಡಿ, ಇಂದು ಶಿಕ್ಷಕ ವೃತ್ತಿ ಸುಲಭವಾಗಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಂತೆ ಅದಕ್ಕನುಗುಣವಾಗಿ ಶಿಕ್ಷಕರೂ ಮಾರ್ಪಾಡು ಮಾಡಿಕೊಂಡು ಉತ್ತಮ ಮೌಲ್ಯಗಳನ್ನು ಮಕ್ಕಳಿಗೆ ಹೇಳಿಕೊಡಬೇಕು ಎಂದು ತಿಳಿಸಿದರು.ಭೀಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸನ್ಮಾನಿತ ಶಿಕ್ಷಕ ಎಂ.ಡಿ.ಯೋಗೇಶ್ ಮಾತನಾಡಿ, ಪ್ರಪಂಚದಲ್ಲಿ ದೊಡ್ಡ ಸಾಧಕರ ಹಿಂದೆ ಒಬ್ಬ ಗುರು ಇದ್ದೇ ಇರುತ್ತಾನೆ. ತಮಗೆ ಬುದ್ಧಿವಾದ ಹೇಳಿ, ತಪ್ಪನ್ನು ತಿದ್ದಿ, ಅಕ್ಷರ ಕಲಿಸಿಕೊಟ್ಟು ಜೀವನಕ್ಕೆ ಮಾರ್ಗದರ್ಶನ ನೀಡಿದ ತಮ್ಮೆಲ್ಲಾ ಶಿಕ್ಷಕರನ್ನು ಸ್ಮರಿಸಿಕೊಳ್ಳುವ ಮೂಲಕ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಕೆ.ಭಾನುಪ್ರಕಾಶ್, ಎಂ.ಡಿ.ಯೋಗೇಶ್, ಎಂ.ಪಿ.ರಾಜೇಶ್, ಡಿ.ಜಿ. ಶೃತಿ, ವೈ.ಜೆ.ದಾಕ್ಷಾಯಿಣಿ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಿಜಿಎಸ್ ಐಟಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.