ಕನ್ನಡಪ್ರಭ ವಾರ್ತೆ ಬ್ಯಾಡಗಿ
ಕಲಿಕಾ ಹಂತದಲ್ಲಿರುವ ಮಕ್ಕಳನ್ನು ದೇಶದ ಒಬ್ಬ ಪ್ರಬುದ್ಧ ಹಾಗೂ ಜವಾಬ್ದಾರಿಯುತ ನಾಗರಿಕನಾಗಿಸುವ ಶಕ್ತಿ ಕೇವಲ ಶಿಕ್ಷಕರಲ್ಲಿದೆ. ಹೀಗಾಗಿ ಅವರೆಲ್ಲರೂ ದೇಶದ ಆಧಾರಸ್ತಂಭವೆಂದರೂ ತಪ್ಪಿಲ್ಲ. ಆದ್ದರಿಂದ ಅವರ ಶೈಕ್ಷಣಿಕ ಸೇವೆ ಅವಿಸ್ಮರಣೀಯ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯ ವ್ಯಕ್ತಪಡಿಸಿದರು.ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದೊಮ್ಮೆ ಪ್ರಭಾವಶಾಲಿ ಶಿಕ್ಷಕರು ಮನಸ್ಸು ಮಾಡಿದರೇ ಭದ್ರವಾದ ಸಮಾಜ ಸೇರಿದಂತೆ ದೇಶವನ್ನು ಕಟ್ಟಲು ಸಾಧ್ಯ. ಚಿಕ್ಕವಯಸ್ಸಿನಲ್ಲಿ ಶಿಕ್ಷಕರು ಮಕ್ಕಳಿಗೆ ಕಲಿಸಿದ್ದನ್ನು ಅವರು ತಮ್ಮ ಜೀವನದುದ್ದಕ್ಕೂ ಮುಂದುವರೆಸುತ್ತಾರೆ. ಅವರ ಶೈಕ್ಷಣಿಕ ಹಂತದ ಪ್ರತಿಯೊಂದು ಅಂಶಗಳು ಕುಟುಂಬ ಮತ್ತು ಸಮಾಜದ ಮೇಲೆ ಪ್ರಭಾವ ಬೀರಲಿದ್ದು ಈ ನಿಟ್ಟಿನಲ್ಲಿ ಎಲ್ಲ ಶಿಕ್ಷಕರು ತಮ್ಮ ಹೊಣೆಗಾರಿಕೆಯನ್ನು ತೋರಿಸಬೇಕಾಗುತ್ತದೆ ಎಂದರು.ಜೀವನ ಮತ್ತು ವೈಯಕ್ತಿಕ ಗುರಿಗಳ ಕಲ್ಪನೆಯ ಜೊತೆಗೆ ಮಕ್ಕಳಲ್ಲಿ ಧನಾತ್ಮಕ ಮತ್ತು ಸ್ಫೂರ್ತಿದಾಯಕ ವಿಷಯಗಳನ್ನು ಅಳವಡಿಸುವ ಮೂಲಕ ಭವಿಷ್ಯದ ದಿನಗಳಿಗೆ ಅವಶ್ಯವಿರುವ ಸಮರ್ಥ ನಾಯಕರನ್ನು ರೂಪಿಸಿ ಕೊಡುವ ಹೊಣೆಗಾರಿಕೆ ತೋರಬೇಕಾಗಿದೆ ಎಂದರು.
ಯಾವುದೇ ಶಾಲೆಯಿರಲಿ ಶೇ.100ರಷ್ಟು ಫಲಿತಾಂಶ ಪಡೆದ ಮಾತ್ರಕ್ಕೆ ಉತ್ತಮ ಶಾಲೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ತಾಂತ್ರಿಕತೆ ಬೆಳವಣಿಗೆಯಿಂದ ಮಕ್ಕಳಿಗೆ ವಿಷಯ ಬೋಧನೆ ಕಠಿಣ ಕೆಲಸವಲ್ಲ, ಕೇವಲ ಪಾಠ ಮಾಡುವ ಶಿಕ್ಷಕರ ಸಂಖ್ಯೆ ಬೇಕಾದಷ್ಟಿದೆ. ಆದರೆ ಕಲಿತಂತಹ ಮಕ್ಕಳು ಭವಿಷ್ಯದಲ್ಲಿ ಯಾವ ಹಂತವನ್ನು ತಲುಪುತ್ತಿದ್ದಾರೆ ಎಂಬ ಆತ್ಮಾವಲೋಕನ ಆಗಬೇಕಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ ನಾಯಕ, ಉಪಾಧ್ಯಕ್ಷೆ ಮೀನಾಕ್ಷವ್ವ ಅಂಗಡಿ, ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ನಿಂಗನಗೌಡ ಕಲ್ಲಾಪುರ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಳವಿಗಿ, ನಿವೃತ್ತ ಪ್ರಾಧ್ಯಾಪಕ ಸದಾನಂದ ಪಾಟೀಲ, ಕೆ.ವಿ.ಜಿ. ಬ್ಯಾಂಕ್ ಮ್ಯಾನೇಜರ್ ಸಿ. ಕಲ್ಯಾಣ, ಕ್ಯಾನಕೋರ ಲಿ. ಮ್ಯಾನೇಜರ್ ಕಿಶನ್‌ಕುಮಾರ, ಗುತ್ತಿಗೆದಾರರಾದ ವಿ.ವಿ. ಹಿರೇಮಠ, ಆರ್. ನಾಗರಾಜ, ನಾಗರಾಜ ಅನ್ವೇರಿ, ಶಿವಪುತ್ರಪ್ಪ ಅಗಡಿ, ಕೃಷ್ಣಾ ಏಜೆನ್ಸಿ ಪ್ರಭಾಕರ ಮಂಗಳೂರ, ರೇಣುಕಾ ಸ್ಟೀಲ್ಸ್ ಶ್ರೀನಿವಾಸ ಪವಾರ, ಆಡಳಿತಾಧಿಕಾರಿ ವೀರಬಸಯ್ಯ ಹಾವೇರಿಮಠ, ಬಸವರಾಜ ಹಾವೇರಿಮಠ, ಸತೀಶ ಪಾಟೀಲ, ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ದಾನಪ್ಪ ಯಲಿಗಾರ ಇತರರಿದ್ದರು.