ಜಡೇಕುಂಟೆ ಮಂಜುನಾಥ್
ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳ ತರಗತಿ ಕೋಣೆಗಳಲ್ಲಿರುವ ಕಪ್ಪು ಬೋರ್ಡ್ ಗಳ ಸ್ಥಿತಿ ಚಿಂತಾಜನಕವಾಗಿವೆ. ಸುಮಾರು ವರ್ಷಗಳಿಂದಲೂ ಹಾಳಾಗಿರುವ ಬೋರ್ಡುಗಳ ಮೇಲೆ ಶಿಕ್ಷಕರು ಬರೆದ ಯಾವುದೇ ಬರಹ ಕಾಣಿಸದಂತಿವೆ. ಇವುಗಳಿಗೆ ಜೀವ ಹೋಗಿದ್ದು, ಮತ್ತೆ ಜೀವಕಳೆ ತುಂಬಿಸಲು ಇದೀಗ ಕಪ್ಪು ಬೋರ್ಡಿಗೆ ಬಣ್ಣ ಬಳಿಯುವ ಅಭಿಯಾನ ಶುರು ಮಾಡಿರುವ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಶಾಲೆಗೆ ಭೇಟಿ ನೀಡಿದಾಗಲೂ ಇಂತಹ ಅಗತ್ಯ ಸೌಲಭ್ಯದಿಂದ ಮಕ್ಕಳು ವಂಚಿತರಾಗಬಾರದು ಇಂತಹ ಬೋರ್ಡುಗಳೇ ವಿದ್ಯಾರ್ಥಿಗಳ ಕಲಿಕಾ ವಿಧಾನಕ್ಕೆ ಜೀವಾಳ ಎಂದುಕೊಂಡು ಕಾಯಕಲ್ಪ ನೀಡಲು ಮುಂದಾಗಿದ್ದಾರೆ.
ತರಗತಿ ಕೋಣೆಗೆ ಶಿಕ್ಷಕರಾದವರು ಬಂದಾಕ್ಷಣವೇ ಕಪ್ಪು ಬೋರ್ಡಿನ ಮೇಲೆ ದಿನಾಂಕ, ಹಾಜರಾತಿ ಸಂಖ್ಯೆ, ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಪಾಠ ಶುರುಮಾಡಿದಾಗ ಪಾಠದ ಹೆಸರು, ಗಣಿತ ಕಲಿಸುವಾಗ ಲೆಕ್ಕಗಳನ್ನು ಸೂತ್ರಗಳನ್ನು ಬೋರ್ಡಿನ ಮೇಲೆ ಬರೆದಾಗ ಮಾತ್ರ ವಿದ್ಯಾರ್ಥಿಗಳಿಗೆ ಅರ್ಥ ಆಗುತ್ತವೆ.ತಾಲೂಕಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಪ್ಪು ಬೋರ್ಡುಗಳು ಬರೆದರೂ ಕಾಣಿಸದಷ್ಟು ಹಾಳಾಗಿ ಹೋಗಿದ್ದವು. ಇಂತಹ ಶಾಲೆಗಳಿಗೆ ಭೇಟಿ ನೀಡಿದಾಗ ಗಮನಿಸಿದ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಹಾಗೂ ಸಮೂಹ ಸಂಪನ್ಮೂಲ ಅಧಿಕಾರಿ ಎಚ್.ಬಿ. ಮಂಜುಬಾಬು ಯಾವ ಶಾಲೆಗಳಲ್ಲಿ ಬೋರ್ಡುಗಳು ಹಾಳಾಗಿವೆಯೋ ಅಂತಹ ಶಾಲೆಯ ಶಿಕ್ಷಕರಿಗೆ ಶಾಲಾ ಅನುದಾನವನ್ನು ಬಳಸಿಕೊಂಡು ಬೋರ್ಡುಗಳಿಗೆ ಕಾಯಕಲ್ಪ ನೀಡಿ ಎಂದು ಸೂಚಿಸಿದ್ದಾರೆ.
ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೊಂದಲು ಮಕ್ಕಳು ಸಿಗುತ್ತಿಲ್ಲ. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿ ಸರ್ಕಾರಿ ಶಾಲೆಗಳ ಕಡೆಗೆ ತಲೆ ಹಾಕುತ್ತಿಲ್ಲ. ಈ ಕಾರಣಕ್ಕಾಗಿಯೇ ಜೂನ್ ತಿಂಗಳು ಬಂತೆಂದರೆ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಶಿಕ್ಷಕರೇ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸುವ ಕಡೆಗೆ ಹೆಜ್ಜೆ ಹಾಕುತ್ತಿರುವುದು ಈಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಆದರೂ ಕೆಲವು ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ಜೀರೋ ದಾಖಲಾತಿ ಎಂಬಂತಾಗಿದೆ.
ಚಳ್ಳಕೆರೆ ತಾಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆಗಳು 357, ಸರ್ಕಾರಿ ಪ್ರೌಢಶಾಲೆಗಳು 23 ಸೇರಿ ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ 380. ಇದರಲ್ಲಿ ನೂರರಿಂದ ನೂರಾ ಇಪ್ಪತ್ತು ಸರ್ಕಾರಿ ಶಾಲೆಗಳಲ್ಲಿ ಕಪ್ಪು ಬೋರ್ಡುಗಳು ಹಾಳಾಗಿವೆ.