ಅರಸೀಕೆರೆ: ಶಾಲಾ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಶೂ, ಚಪ್ಪಲಿಗಳ ವಿತರಣೆಯ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡುವ ಬದಲು, ಈ ಹಿಂದೆ ಅನುಸರಿಸುತ್ತಿದ್ದಂತೆ ಏಜೆನ್ಸಿಗಳ ಮೂಲಕವೇ ವಿತರಣೆ ವ್ಯವಸ್ಥೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಶೂ-ಚಪ್ಪಲಿ ವಿತರಣೆಯನ್ನು ಶಿಕ್ಷಕರಿಂದ ಮಾಡಿಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ್ ಮಾತನಾಡಿ, ಶಿಕ್ಷಕರಿಗೆ ಈಗಾಗಲೇ ಬೋಧನೆಯ ಜೊತೆಗೆ ಅನೇಕ ಬೋಧಕೇತರ ಕಾರ್ಯಗಳನ್ನು ವಹಿಸಲಾಗಿದೆ. ಇದರ ನಡುವೆ ಶೂ-ಚಪ್ಪಲಿಗಳನ್ನು ಸಾಗಾಟ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸುವ ಜವಾಬ್ದಾರಿಯನ್ನೂ ನೀಡಿದರೆ ಪಾಠ-ಪ್ರವಚನ ಹಾಗೂ ತರಗತಿ ನಿರ್ವಹಣೆಗೆ ತೊಂದರೆಯಾಗಲಿದೆ ಎಂದು ಹೇಳಿದರು.ಈ ಹಿಂದೆ ಏಜೆನ್ಸಿಗಳ ಮೂಲಕವೇ ಶೂ-ಚಪ್ಪಲಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ಮುಂದುವರಿಸಿದರೆ ಶಿಕ್ಷಕರು ತಮ್ಮ ಮೂಲ ಕರ್ತವ್ಯವಾದ ಬೋಧನಾ ಕಾರ್ಯಕ್ಕೆ ಹೆಚ್ಚಿನ ಸಮಯ ಮೀಸಲಿಡಲು ಸಾಧ್ಯವಾಗುತ್ತದೆ. ಆದ್ದರಿಂದ ಸರ್ಕಾರ ಈ ವರ್ಷದಂದೇ ಹಳೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸುವ ಮೊಟ್ಟೆಯ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ಸರ್ಕಾರ ಹಿಂದಿನ ದರದಲ್ಲಿಯೇ ಅನುದಾನ ಬಿಡುಗಡೆ ಮಾಡುತ್ತಿದೆ. ಇದರಿಂದ ಶಿಕ್ಷಕರು ತಮ್ಮ ಸ್ವಂತ ಹಣವನ್ನು ವೆಚ್ಚ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೊಟ್ಟೆ ಖರೀದಿಗೆ ನೀಡುವ ದರವನ್ನು ತಕ್ಷಣವೇ ಪರಿಷ್ಕರಿಸಬೇಕು ಎಂದು ಅವರು ಒತ್ತಾಯಿಸಿದರು.ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಾಣೆಗೆರೆ ಶೇಖರ್, ಸುಧಾಮಣಿ, ಪ್ರಧಾನ ಕಾರ್ಯದರ್ಶಿ ನವೀನ್, ಸಹ ಕಾರ್ಯದರ್ಶಿ ಕಲಾವತಿ, ಖಜಾಂಚಿ ಸೋಮಶೇಖರ್ ಹಾಗೂ ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.