ಸೊರಬ: ಶಾಲೆಯಲ್ಲಿ ಆಹಾರದ ಗುಣಮಟ್ಟ ಕಾಯ್ದುಕೊಳ್ಳಲು ಮೊದಲ ಹಂತದಲ್ಲಿ ಸುಮಾರು ೧೬೫೦೦ ಸರ್ಕಾರಿ ಶಾಲೆಗಳಿಗೆ ಸರ್ಕಾರದ ವತಿಯಿಂದ ಅಲ್ಯೂಮಿನಿಯಂ ಪಾತ್ರೆ ವಿತರಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.ತಾಲೂಕಿನ ಬಿಳಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗದಂತೆ ಹಾಗೂ ದೈಹಿಕ, ಮಾನಸಿಕ ವಿಕಸನಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಪೌಷ್ಟಿಕ ಆಹಾರದ ಜೊತೆಗೆ ಎಲ್ಲ ಮಕ್ಕಳಿಗೂ ಮೊಟ್ಟೆ ವಿತರಿಸಲಾಗುತ್ತಿದೆ. ಅಹಾರದ ಗುಣಮಟ್ಟ ಕಾಯ್ದುಕೊಳ್ಳಲು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಲ್ಯೂಮಿನಿಯಂ ಪಾತ್ರೆ ನೀಡಲಾಗುವುದು ಎಂದು ಹೇಳಿದರು.ಮಕ್ಕಳ ಕಡ್ಡಾಯ ಹಾಜರಾತಿ ಬಗ್ಗೆ ಶಿಕ್ಷಕರು ಗಮನ ನೀಡಬೇಕು. ಅಲ್ಲದೇ ಪೋಷಕರು ಕೂಡ ಮಕ್ಕಳು ಗೈರಾಗದಂತೆ ನೋಡಿಕೊಳ್ಳಬೇಕು. ಒಂದು ದಿನದ ಪಾಠ ತಪ್ಪಿದರೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಗಣಿಸಲಿದ್ದು, ಈ ಬಗ್ಗೆ ಶಿಕ್ಷಕರು ಹಾಗೂ ಪೋಷಕರು ಗಂಭೀರವಾಗಿ ಪರಿಗಣಿಸಿ ತರಗತಿಯಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.ಖಾಸಗಿ ಶಾಲೆಯಲ್ಲಿ ಮಕ್ಕಳ ಪ್ರವೇಶಾತಿ ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು ಪೋಷಕರ ಮನವೊಲಿಸಿ ನಿಮ್ಮೂರಿನ ಶಾಲೆಗೆ ಪ್ರವೇಶ ಮಾಡುವಂತೆ ಪ್ರೇರಣೆ ನೀಡಬೇಕು. ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಸೌಲಭ್ಯಗಳನ್ನು ನೀಡಿದೆ. ಇದರಿಂದ ಮಕ್ಕಳ ಕೊರತೆ ಎದುರಿಸುತ್ತಿರುವ ಶಾಲೆಗಳನ್ನು ಮುಂದುವರೆಸಲು ಅನುಕೂಲವಾಗಲಿದೆ ಎಂದರು.ಇದೇ ವೇಳೆ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಮತ್ತು ಶಿಕ್ಷಕರಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕೆ.ಆರ್.ಶಿವಾನಂದಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತಕುಮಾರ್, ಮುಖ್ಯ ಶಿಕ್ಷಕ ಅರುಣಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಬಿಇಒ ಪುಷ್ಪಾ, ಕ್ಷೇತ್ರ ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ, ಅಕ್ಷರ ದಾಸೋಹ ನಿರ್ದೇಶಕ ಡಾ.ಶ್ರೀಕಾಂತ್, ಮಾಜಿ ಜಿ.ಪಂ. ಸದಸ್ಯ ತಬಲಿ ಬಂಗಾರಪ್ಪ, ಮಾಜಿ ತಾ.ಪಂ. ಅಧ್ಯಕ್ಷ ಎಚ್. ಗಣಪತಿ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ, ಚಿಕ್ಕಸವಿ ನಾಗರಾಜ್, ಗ್ರಾಮ ಪಂಚಾಯತಿ ಮಾಜಿ ಸದಸ್ಯ ವಾಸಪ್ಪ ಬಿಳಾಗಿ, ಸಣ್ಣಪ್ಪ, ವಕೀಲ ತಮ್ಮಣ್ಣಪ್ಪ, ಕೃಷ್ಣಮೂರ್ತಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.