ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಶೈಕ್ಷಣಿಕವಾಗಿ ಪಾಠ ಮಾಡುವುದು ಸಾಮಾನ್ಯ. ಆದರೆ, ವಿದ್ಯಾರ್ಥಿಗಳಿಗೆ ಜೀವನ ಹೇಗೆ ನಡೆಸಬೇಕು ಎಂಬ ಬದುಕಿನ ಪಾಠ ಹೇಳಿಕೊಡಬೇಕಿದೆ ಎಂದರು.
ಪ್ರತಿದಿನ ಅರ್ಧಗಂಟೆ ಕಾಲ ಶಿಕ್ಷಕರು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಎದುರಿಸಬೇಕಿರುವ ಸವಾಲುಗಳು, ಧೈರ್ಯ, ದೃಢತೆ, ನಾಯಕತ್ವ ಗುಣಗಳನ್ನು ಬೆಳಸಿ ಅವರನ್ನು ದೇಶದ ಸತ್ಪ್ರಜೆಗಳಾಗಿ ಸಜ್ಜುಗೊಳಿಸಬೇಕು ಎಂದರು.ಮಕ್ಕಳಿಗೆ ತಂದೆ, ತಾಯಿ ನಂತರ ಅವರ ತಪ್ಪುಗಳನ್ನು ತಿದ್ದಿ, ತಿಳಿ ಹೇಳುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ. ವಿದ್ಯಾರ್ಥಿಗಳು ಮಾಡುವ ಸಾಧನೆ ಹಿಂದೆ ಗುರುಗಳ ಪರಿಶ್ರಮವಿರುತ್ತದೆ. ಈ ಹಿನ್ನಲೆಯಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದರು.
ಶಿಕ್ಷಕರ ಅನುಕೂಲಕ್ಕಾಗಿ ನಗರದ ಗುರುಭವನವನ್ನು ಅಭಿವೃದ್ಧಿ ಪಡಿಸಲು ಶಿಕ್ಷಣ ಸಚಿವರ ಸಹಕಾರದೊಂದಿಗೆ 50 ಲಕ್ಷ ರು. ಅನುದಾನವನ್ನು ಸರ್ಕಾರ ಬಿಡುಗಡೆಗೊಳಿಸಲಿದೆ. ಶೀಘ್ರ ಗುರು ಭವನ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿದೆ ಎಂದು ಭರವಸೆ ನೀಡಿದರು.
ಶಿಕ್ಷಕರಿಂದ ದೇಶ, ರಾಜ್ಯ ಬೆಳಗುತ್ತದೆ. ಮಕ್ಕಳಿಗೆ ತಂದೆ, ತಾಯಿ ನಂತರ ದೇವರ ರೂಪದಲ್ಲಿ ಕಾಣುವವರು ಶಿಕ್ಷಕರು. ಶಿಕ್ಷಕರಿಗೆ ಅನ್ಯಾಯವಾದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ. ದಯಮಾಡಿ ಸರ್ಕಾರ ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಶಿಕ್ಷಣ ಕ್ಷೇತ್ರ ಶ್ರೇಷ್ಠವಾದುದ್ದು. ಶಿಕ್ಷಕರ ವೃತ್ತಿ ಬಹಳ ಜವಾಬ್ದರಿಯುತ ವೃತ್ತಿ, ಪ್ರತಿಯೊಬ್ಬ ಶಿಕ್ಷಕರು ನೈತಿಕತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಉದ್ಧಾರಕ್ಕಾಗಿ ಶ್ರಮಿಸಿ ಮತ್ತು ಸಮಾಜಕ್ಕೆ ಮಾದರಿಯಾಗಿ ಎಂದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಪಂ ಸಿಇಒ ಕೆ.ಆರ್.ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚಲುವಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಲೋಕೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ವಾಸುಕಿ ಪ್ರಸನ್ನ ಹಾಗೂ ಜಿಲ್ಲಾ ಪ್ರಾಥಮಿಕ ಸರ್ಕಾರಿ ಶಿಕ್ಷಣ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್ ಸೇರಿದಂತೆ ಹಲವು ಉಪಸ್ಥಿತರಿದ್ದರು.