ಹಿರೇಕೆರೂರು: ಮಕ್ಕಳ ಕಲಿಕೆ, ಪೌಷ್ಟಿಕಾಂಶ ಬೆಂಬಲ, ನೈರ್ಮಲ್ಯ ಮತ್ತು ಸುರಕ್ಷತೆ ಕುರಿತು ಪೋಷಕರ ಅಭಿಪ್ರಾಯ ಪಡೆಯುವುದು, ಸರ್ಕಾರಿ ಶಾಲೆ ವ್ಯವಸ್ಥೆಯಿಂದ ಒದಗಿಸಲಾಗುತ್ತಿರುವ ಪ್ರೋತ್ಸಾಹಕಗಳ ಸೌಲಭ್ಯಗಳ ಅರಿವು ಹೊಂದಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ -2025 ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚು ಬಂದಿರುವುದು ಹೆಮ್ಮೆಯ ವಿಷಯ. ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗಾಗಿ ಹಿರೇಕೆರೂರು ತಾಲೂಕಿನ ದೂದೀಹಳ್ಳಿ ಹಾಗೂ ಹಿರೇಕೆರೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರನ್ನು ಅಭಿನಂದಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಎನ್. ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಪ್ರಧಾನ ಮಂತ್ರಿ ಪೋಷಣೆ ಅಭಿಯಾನದ ಸಹಾಯಕ ನಿರ್ದೇಶಕ ಎಚ್.ಎಚ್. ಜಾಡರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೇಘರಾಜ ಮಾಳಗಿಮನಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟಪ್ಪಗೌಡ್ರ, ಕಾರ್ಯದರ್ಶಿ ರಮೇಶ್ ಪೂಜಾರ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಚೇರ್‌ಮನ್ ಎಂ.ಬಿ. ಹಾದಿಮನಿ, ಕಾರ್ಯದರ್ಶಿ ಜೆ.ಬಿ. ಜೋಗಿಹಳ್ಳಿ, ಎಸ್‌ಡಿಎಂಸಿ ಸದಸ್ಯರಾದ ರವಿ ಸಿದ್ದಪ್ಪ ಗೌಡ್ರ, ಪಿ.ಬಿ. ನಿಂಗನಗೌಡ್ರ, ಪ್ರಾಚಾರ್ಯ ಮಹದೇವ್ ಇದ್ದರು.ಬಸನಗೌಡ ಬಣಕಾರ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ. ಮುದಕನಗೌಡ್ರ ವಂದಿಸಿದರು.ಅನ್ಯ ಸಮುದಾಯಗಳ ಜಾತಿ ಮಾಹಿತಿ ಸಂಗ್ರಹ ಬೇಡ
ರಾಣಿಬೆನ್ನೂರು: ಪರಿಶಿಷ್ಟ ಜಾತಿ ಸಮೀಕ್ಷೆ ಮಾಡುವಾಗ ಅನ್ಯ ಸಮುದಾಯಗಳ ಜಾತಿ ಮಾಹಿತಿ ಸಂಗ್ರಹಿಸಬಾರದು ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಬುಧವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಸಮೀಕ್ಷೆ ಪ್ರಾರಂಭವಾಗಿದೆ. ಗಣತಿದಾರರು ಅನ್ಯ ಜಾತಿ, ಸಮುದಾಯಗಳ ಮಾಹಿತಿಯನ್ನು ಕೂಡಾ ಕಲೆ ಹಾಕುತ್ತಿರುವುದು ಬೆಳಕಿಗೆ ಬಂದಿದೆ. ಕಾರಣ ಗಣತಿದಾರರಿಗೆ ಗಣತಿಯ ಉದ್ದೇಶದ ಬಗ್ಗೆ ಅರಿವು ಮೂಡಿಸಿ ಸಮೀಕ್ಷೆ ಮಾಡಲು ಆದೇಶ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ವಿ.ವೀ. ಹರಪನಹಳ್ಳಿ, ಅಶೋಕ ಗಂಗನಗೌಡ್ರ, ವಿನಯಕುಮಾರ ಪಾಟೀಲ, ಎಸ್.ವಿ. ರೊಡ್ಡನವರ ಇದ್ದರು.