ಮಾಗಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ರಾಜ್ಯದ ಮೈತ್ರಿಕೂಟದ ನಾಲ್ಕೂ ಸ್ಥಾನಗಳ ಗೆಲುವು ಮುಂದಿನ ಪಂಚಾಯತಿ ಹಾಗೂ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿದ್ದು, ಶಿಕ್ಷಕರು ಸರ್ಕಾರಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಎ.ಎಚ್.ಬಸವರಾಜು ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ ಮುಂತಾದ ಕ್ಷೇತ್ರಗಳ ಶಿಕ್ಷಕರೊಂದಿಗೆ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ್ದ ಸಂದರ್ಭದಲ್ಲಿಯೇ ಬದಲಾವಣೆಯ ಮುನ್ಸೂಚನೆ ಸಿಕ್ಕಿತ್ತು. ಪ್ರಜ್ಞಾವಂತ ಶಿಕ್ಷಕರಿಗೆ ಅಭಿನಂದನೆಗಳು. ಶಾಲೆಯಲ್ಲಿ ಅಂತಿಮ ಪರೀಕ್ಷೆಗೆ ಮುನ್ನ ಪ್ರಿಲಿಮಿನರಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡುವಂತೆ, ಸಮಾಜಕ್ಕೆ ಮಾರ್ಗದರ್ಶನ ನೀಡುವ ಶಿಕ್ಷಕರು, ಈ ಫಲಿತಾಂಶದ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಫೇಲ್ ಮಾಡಿ, ಟಿ.ಸಿ ಕೊಟ್ಟು ಕಳುಹಿಸಿದ್ದಾರೆ ಎಂದು ಲೇವಡಿ ಮಾಡಿದರು.
2028ರ ವಿಧಾನಸಭಾ ಚುನಾವಣೆ ದಿಕ್ಸೂಚಿ:ಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲೂ ಎನ್‌ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ದೊರೆತ ಭಾರಿ ಹಿನ್ನಡೆ. ಈ ಗೆಲುವು ಮುಂದಿನ 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ಬೇರು ಸಮೇತ ಕಿತ್ತೊಗೆದು ಎನ್‌ಡಿಎ ಅಧಿಕಾರಕ್ಕೆ ಬರಲು ಬಲವಾದ ಅಡಿಪಾಯ ಹಾಕಿದೆ. ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲೂ ಇದೇ ಮಾದರಿಯ ವಿಜಯೋತ್ಸವ ಮುಂದುವರಿಸಲಿವೆ ಎಂದರು.
ಹಿಂದೆ ಕೆಂಗಲ್ ಹನುಮಂತಯ್ಯನವರಂತಹ ಮಹನೀಯರು ಕಟ್ಟಿದ ವಿಧಾನಸೌಧದ ಗೌರವವನ್ನು ಕಾಪಾಡಬೇಕು. ಸ್ಟಿಂಗ್ ಆಪರೇಷನ್ ಮೂಲಕ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಪಮಾನ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ನೆಲ ಕಚ್ಚುವ ಹಂತಕ್ಕೆ ತಲುಪಿದೆ. ಅಧಿಕಾರಿಗಳು ಹಾಗೂ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಕಾರ್ಯಕರ್ತರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಬಸವರಾಜು ಖಂಡಿಸಿದರು.
(ಫೋಟೋ ಕ್ಯಾಫ್ಷನ್)