ಸಾಹಿತ್ಯ ಬೋಧಿಸುವ ಶಿಕ್ಷಕರ ಮೇಲಿದೆ ದೊಡ್ಡ ಜವಾಬ್ದಾರಿ: ಪ್ರೊ. ಖಾನ್

KannadaprabhaNewsNetwork |  
Published : Nov 24, 2025, 02:30 AM IST
23ಡಿಡಬ್ಲೂಡಿ2ಕವಿವಿಯಲ್ಲಿ ನಡೆದ ಕನ್ನಡ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರದ ಸಮಾರೋಪದಲ್ಲಿ ಅಭಿಜಿತ ಕನ್ನಡ ಸಂಶೋಧನಾ ಗ್ರಂಥವನ್ನು ಬಿಡುಗಡೆ ಗೊಳಿಸಲಾಯಿತು. | Kannada Prabha

ಸಾರಾಂಶ

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಮೇಲಿನ ಆಸಕ್ತಿಯನ್ನು ವೃದ್ಧಿಸುವ ಜವಾಬ್ದಾರಿ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎ.ಎಂ. ಖಾನ್ ಹೇಳಿದರು.

ಧಾರವಾಡ: ಸಾಹಿತ್ಯವು ಸಮಾಜದ ಮೌಲ್ಯಗಳು, ಮನೋವೃತ್ತಿ ಮತ್ತು ಸಂಸ್ಕೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ‌ ಸಾಹಿತ್ಯ ಬೋಧಿಸುವ ಶಿಕ್ಷಕರ ಮೇಲೆ ಮಹತ್ತರ ಜವಾಬ್ದಾರಿ ಇದೆ ಎಂದು ಕರ್ನಾಟಕ ವಿವಿ ಕುಲಪತಿ ಪ್ರೊ.ಎ.ಎಂ. ಖಾನ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಮಾಳವಿಯಾ ಮಿಷನ್ ಟೀಚರ್ಸ್ ಟ್ರೇನಿಂಗ್ ಕೇಂದ್ರ ವತಿಯಿಂದ ಎರಡು ವಾರಗಳ ವರೆಗೆ ಆಯೋಜಿಸಿದ ಕನ್ನಡ ಪ್ರಾಧ್ಯಾಪಕರ ಪುನಶ್ಚೇತನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಅಧ್ಯಯನಶೀಲತೆ ಕಡಿಮೆ ಆಗುತ್ತಿರುವುದು ಕಳವಳದ ಸಂಗತಿ. ಕನ್ನಡ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ಮಟ್ಟದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಸಾಹಿತ್ಯದ ಮೇಲಿನ ಆಸಕ್ತಿಯನ್ನು ವೃದ್ಧಿಸುವ ಜವಾಬ್ದಾರಿ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇವಲ ಪಾಠ ಬೋಧನೆ ಮಾತ್ರವಲ್ಲ, ಸಾಹಿತ್ಯದ ಮೂಲಕ ಪ್ರಗತಿಶೀಲ ಚಿಂತನೆ ಬೆಳೆಸುವುದು, ಕುತೂಹಲವನ್ನು ವಿದ್ಯಾರ್ಥಿಗಳಲ್ಲಿ ಜಾಗೃತಿಗೊಳಿಸುವ ಕಾರ್ಯ ಬೋಧಕರ ಮೇಲಿದೆ ಎಂದ ಅವರು ಸಾಹಿತ್ಯ ಬೋಧನೆಯನ್ನು ಹೆಚ್ಚು ಆಕರ್ಷಕ ಮತ್ತು ಕಾಲಾನುಗುಣಗೊಳಿಸಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಳವಿಯಾ ಮಿಷನ್ ಟಿಚರ್ಸ್ ಟ್ರೈನಿಂಗ್ ನಿರ್ದೇಶಕ ಡಾ. ಬಿ.ಎಚ್. ನಾಗೂರು ಮಾತನಾಡಿ, ಅಧ್ಯಾಪಕರು ನಿರಂತರ ಜ್ಞಾನಾಭಿವೃದ್ಧಿ ಹೆಚ್ಚು ಮಹತ್ವ ನೀಡಬೇಕು. ಈ ಶಿಬಿರದ ಉದ್ದೇಶ ಭಾಗವಹಿಸಿದ ಶಿಕ್ಷಕರಿಗೆ ವಿಷಯ, ಜ್ಞಾನ ವೃದ್ಧಿಗೊಳಿಸುವುದಷ್ಟೇ ಅಲ್ಲ, ಉತ್ತಮ ಬೋಧನಾ ಕೌಶಲ್ಯಗಳನ್ನು ಬೆಳೆಸುವುದೂ ಆಗಿತ್ತು ಎಂದರು. ತರಬೇತಿಯ ನಿಜವಾದ ಫಲಿತಾಂಶ ಶಿಕ್ಷಕರು ತಮ್ಮ ತರಗತಿಗಳಿಗೆ ಹಿಂತಿರುಗಿ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸುವಲ್ಲಿ ಕಾಣಿಸಿಕೊಂಡಾಗ ಮಾತ್ರ ಸಾರ್ಥಕ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಶೋಧನಾ ಲೇಖನಗಳ ಸಂಗ್ರಹ ಒಳಗೊಂಡ '''''''' ಅಭಿಜಿತ ಕನ್ನಡ'''''''' ಎಂಬ ಗ್ರಂಥ ಬಿಡುಗಡೆಯಾಯಿತು. ಶಿಬಿರದಲ್ಲಿ ಹಲವಾರು ತಜ್ಞರು ಉಪನ್ಯಾಸಗಳು, ಸಂವಾದಾತ್ಮಕ ಚರ್ಚೆಗಳು, ಸಮಕಾಲೀನ ಕನ್ನಡ ಸಾಹಿತ್ಯ ಕುರಿತು ಚರ್ಚೆಗಳು ಹಾಗೂ ನವೀನ ಬೋಧನಾ ವಿಧಾನಗಳ ಕುರಿತು ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದರು. ಪ್ರಾಧ್ಯಾಪಕರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಶಿಬಿರದ ಸಂಯೋಜಕ ಡಾ. ನಿಂಗಪ್ಪ‌ ಮುದೇನೂರು ಮತ್ತು ಡಾ. ಅನಸುಯಾ ಕಂಬಳೆ ಡಾ.ಎಂ.ಡಿ.ವಕ್ಕುಂದ ಇದ್ದರು.

PREV

Recommended Stories

ಕನ್ನಡ ಪತ್ರಿಕೆಗಳ ಸಂಗ್ರಹಕಾರ ‘ಪೇಪರ್ ಬ್ಯಾಂಕ್ ಶಿವಕುಮಾರ್’
ಮುಂದುವರಿದ ಉಪವಾಸ ಸತ್ಯಾಗ್ರಹ: ರೈತನ ಅರೋಗ್ಯದಲ್ಲಿ ಏರುಪೇರು