ಕರುಣೆ, ಕಾಳಜಿ, ಕಳಕಳಿಗೆ ವಿವೇಕಾನಂದ ಜನರಲ್ ಆಸ್ಪತ್ರೆ ಹೆಸರುವಾಸಿ: ಕೇಶವ ದೇಸಾಯಿ

KannadaprabhaNewsNetwork |  
Published : Nov 24, 2025, 02:30 AM IST
101 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿಯಾಗಿ ಮೊಣಕಾಲು ಶಶ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಬರೆದ ಡಾ. ವೀರೇಂದ್ರ ಭಸ್ಮೆ ಅವರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಆಸ್ಪತ್ರೆಯಲ್ಲಿ ಸಾಮಾನ್ಯ ಕಾಯಿಲೆಯಿಂದ ಹಿಡಿದು ಅಪರೂಪದ ರೋಗಗಳಿಗೂ ಚಿಕಿತ್ಸೆ ಲಭ್ಯವಿದೆ ಎಂದು ಉದ್ಯಮಿ ಕೇಶವ ದೇಸಾಯಿ ಹೇಳಿದರು.

ಹುಬ್ಬಳ್ಳಿ: ಸತತ 97 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಿವೇಕಾನಂದ ಜನರಲ್ ಆಸ್ಪತ್ರೆಯು ಉತ್ತರ ಕರ್ನಾಟಕವಲ್ಲದೇ, ಇಡೀ ರಾಜ್ಯದಲ್ಲಿಯೇ ವೈದ್ಯೋಪಚಾರ ಹಾಗೂ ಗುಣಮಟ್ಟದ ಸೇವೆಯಿಂದ ಮನೆ ಮಾತಾಗಿದೆ ಎಂದು ವಿವೇಕಾನಂದ ಜನರಲ್ ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಉದ್ಯಮಿ ಕೇಶವ ದೇಸಾಯಿ ಹೇಳಿದರು.

ಅವರು ವಿವೇಕಾನಂದ ಜನರಲ್ ಆಸ್ಪತ್ರೆಯ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ "ಸಮಾಗಮ-2025 " ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ಆಸ್ಪತ್ರೆಯಲ್ಲಿ ಸಾಮಾನ್ಯ ಕಾಯಿಲೆಯಿಂದ ಹಿಡಿದು ಅಪರೂಪದ ರೋಗಗಳಿಗೂ ಚಿಕಿತ್ಸೆ ಲಭ್ಯವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪರಿಣಿತ, ಪ್ರಸಿದ್ಧ ವೈದ್ಯರಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಹಾಗೂ ತಜ್ಞ ವೈದ್ಯರು ಬಡವರಿಗೆ ಭಾರವಾಗದಂತೆ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದಾರೆ ಎಂದರು.1929ರಲ್ಲಿ ಸ್ಥಾಪಿತವಾದ ವಿವೇಕಾನಂದ ಜನರಲ್ ಆಸ್ಪತ್ರೆ, ಮಹಿಳಾ ಆಸ್ಪತ್ರೆ ಎಂದೇ ಪ್ರಸಿದ್ಧವಾಗಿತ್ತು. ಪ್ರಸೂತಿ ಸೇವೆಗಳಿಗೆ ಮಾತ್ರ ಮೀಲಾಗಿದ್ದ ಆಸ್ಪತ್ರೆಯನ್ನು 1995ರಲ್ಲಿ ದಿ. ಡಾ. ಹಾರ್ಡಿಕರ್ ಹಾಗೂ ದಿ. ಡಾ. ಮಹಾಜನ್ ಅವರು ದತ್ತಿ ಸಂಸ್ಥೆಯ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಎಲ್ಲರಿಗೂ ಚಿಕಿತ್ಸೆ ದೊರೆಯುವಂತೆ ಮಾಡಿದರು. ಅಲ್ಲಿಂದ ಮಹಾನ್ ದಾರ್ಶನಿಕರಾದ ದಿವಂಗತ ನಟವರ್ ಲಾಲ್ ಸಂಘವಿ ಅವರ ನೇತೃತ್ವದಲ್ಲಿ ಆಸ್ಪತ್ರೆಯು ಗಮನಾರ್ಹ ಪರಿವರ್ತನೆಗೆ ಒಳಗಾಗಿ, ರಾಜ್ಯದ ಅತ್ಯಂತ ವಿಶ್ವಾಸಾರ್ಹ ಆಸ್ಪತ್ರೆಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ ಎಂದರು.

ಖ್ಯಾತ ಹೃದ್ರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ಔಷಧಿಗಳು ರೋಗಗಳನ್ನು ಗುಣಪಡಿಸಬಹುದು ಆದರೆ, ವೈದ್ಯರು ಮಾತ್ರ ರೋಗಿಗಳನ್ನು ಗುಣಪಡಿಸಬಹುದು ಎಂಬ ಮಾತಿಗೆ ವಿವೇಕಾನಂದ ಜನರಲ್ ಆಸ್ಪತ್ರೆ ಸೂಕ್ತ ಉದಾಹರಣೆ. ದಿ. ನೆಟವರ್ ಭಾಯಿ ಅವರ ಕಾಳಜಿ, ಕಳಕಳಿ ಇಂದು ಸಾಕಾರ ರೂಪ ತಾಳಿ ರೋಗಿಗಳ ಸೇವೆಗೆ ಲಭ್ಯವಿದೆ. ಉತ್ತರ ಕರ್ನಾಟಕದಲ್ಲೇ ಹೆಸರುವಾಸಿಯಾಗಿರುವ ಆಸ್ಪತ್ರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ, ದೇಶವ್ಯಾಪಿ ಪ್ರಸಿದ್ಧಿಯಾಗಲಿದೆ ಎಂದರು.

ಆಸ್ಪತ್ರೆಯ ಚೇರ್ಮನ್ ಕಮಲ್ ಮೆಹತಾ, ಹಿರಿಯ ವೈದ್ಯರಾದ ಡಾ. ರಮೇಶ ಬಾಬು, ಡಾ. ದತ್ತಾ ನಾಡಿಗೇರ ಮಾತನಾಡಿದರು. ಇದೇ ಸಂದರ್ಭದಲ್ಲಿ 101 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿಯಾಗಿ ಮೊಣಕಾಲು ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ `ಇಂಡಿಯಾ ಬುಕ್ ಆಫ್ ರೆಕಾರ್ಡ್''''ನಲ್ಲಿ ದಾಖಲೆ ಬರೆದಿರುವ ಡಾ. ವೀರೇಂದ್ರ ಭಸ್ಮೆ ಅವರನ್ನು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು.

ವಿವೇಕಾನಂದ ಜನರಲ್ ಆಸ್ಪತ್ರೆಯ ಅಧ್ಯಕ್ಷ ದೀಪಕ ಶಾ, ಹಿರಿಯ ವೈದ್ಯರಾದ ಡಾ. ವಿ.ಜಿ. ನಾಡಗೌಡ, ಮಜೇಥಿಯಾ ಫೌಂಡೇಷನ್ ಮುಖ್ಯಸ್ಥ ಜಿತೇಂದ್ರ ಮಜೇಥಿಯಾ, ಡಾ. ಅಮಿತ ಸತ್ತೂರ, ಡಾ. ಸುನಿತಾ ಕನ್ಸಾಲಿ, ಡಾ. ವಿಜಯಮಹಾಂತೇಶ ಪೂಜಾರ್, ಡಾ. ಪವನ ಜೋಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಸ್ವಾಗತಿಸಿದರು. ಸಿಇಓ ಡಾ. ರಾಹುಲ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!