ಯಲಬುರ್ಗಾ:
ಸರ್ಕಾರಿ ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ಬದ್ಧವಿದೆ. ಒಳ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಶಿಕ್ಷಕರ ನೇಮಕಾತಿ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ತಾಲೂಕಿನ ಹಿರೇವಂಕಲಕುಂಟಾ ಹಾಗೂ ಹುಲೇಗುಡ್ಡ ಗ್ರಾಮದಲ್ಲಿ ಕೆಕೆಆರ್‌ಡಿಬಿ ವತಿಯಿಂದ ಮಂಜೂರಾದ ನೂತನ ಸರ್ಕಾರಿ ಪ್ರೌಢಶಾಲೆಗಳ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರೀಕ್ಷಾ ಪದ್ಧತಿ ಬದಲಾವಣೆಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯನ್ನು ಮೂರು ಬಾರಿ ಬರೆಯಲು ಅನುಕೂಲವಾಗಿದೆ. ಇದು ದೇಶದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಈ ಪರೀಕ್ಷಾ ಪದ್ಧತಿಯಿಂದಾಗಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗುವ ಅವಕಾಶ ಒದಗಿಸಲಾಗಿದೆ ಎಂದರು.
6 ದಿನ ಮೊಟ್ಟೆ-ಬಾಳೆಹಣ್ಣು:ಅಜೀಂ ಪ್ರೇಮ್‌ಜಿ ಅವರ ಹಣಕಾಸಿನ ನೆರವಿನಿಂದ ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ವಾರದ ೬ ದಿನ ಮೊಟ್ಟೆ, ಬಾಳೆಹಣ್ಣು ವಿತರಿಸಲಾಗುತ್ತಿದೆ. ಇದರಿಂದ ಅಪೌಷ್ಟಿಕತೆ ಹೋಗಲಾಡಿಸಲು ಸಾಧ್ಯವಾಗಿದೆ ಎಂದರು.
ರಾಜ್ಯದಲ್ಲಿ ೩೬ ಲಕ್ಷ ಪಂಪ್‌ಸೆಟ್‌ಗಳಿಗೆ ಮಾಜಿ ಸಿಎಂ ಎಸ್. ಬಂಗಾರಪ್ಪ ಅವರು ಉಚಿತ ವಿದ್ಯುತ್ ಕೊಟ್ಟಿದ್ದಾರೆ. ಆ ಕಾರ್ಯಕ್ರಮ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಎಸ್. ಬಂಗಾರಪ್ಪ ಅವರು ಆರಾಧನಾ ಎನ್ನುವ ಯೋಜನೆ ಜಾರಿಗೊಳಿಸಿ ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ-ಪುಟ್ಟ ದೇವಸ್ಥಾನ ಅಭಿವೃದ್ಧಿ ಮಾಡಿದರು. ಹಿಂದುತ್ವದ ಬದನೆಕಾಯಿ ಬಗ್ಗೆ ಮಾತನಾಡುವರು ಇದರ ಬಗ್ಗೆ ತಿಳಿದುಕೊಳ್ಳಲಿ ಎಂದರು.ಹೇರ್ ಸ್ಟೈಲ್ ಟೀಕೆಗೆ ತಿರುಗೇಟು:
ನನ್ನ ಹೇರ್ ಸ್ಟೈಲ್ ಬಗ್ಗೆ ಟೀಕೆ ಟಿಪ್ಪಣಿ ಮಾಡುವವರಿಗೆ ನಾನು ಉತ್ತರ ಕೊಡುವುದಿಲ್ಲ. ವಿದ್ಯಾರ್ಥಿಗಳೆ ನಾನು ಚೆನ್ನಾಗಿ ಕಾಣಿಸ್ತಿನಿ ಅಲ್ವಾ? ಎಂದು ಪ್ರಶ್ನಿಸಿದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಟೀಕೆಗಳಿಗೆ ಇದೇ ಉತ್ತರವಾಗಿದೆ ಎಂದ ಅವರು, ಕಲ್ಯಾಣ ಕರ್ನಾಟಕ ಭಾಗವು ಶಿಕ್ಷಣದಲ್ಲಿ ಹಿಂದುಳಿದಿಲ್ಲ. ಈ ಭಾಗದ ಶೇ.೨೫ರಷ್ಟು ಕೆಕೆಆರ್‌ಡಿಬಿ ಅನುದಾನವನ್ನು ಶಿಕ್ಷಣಕ್ಕೆ ಉಪಯೋಗಿಸಿಕೊಂಡ ಏಕೈಕ ಶಾಸಕ ರಾಯರಡ್ಡಿ ಆಗಿದ್ದಾರೆ ಎಂದರು.ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ. ತಾಲೂಕಿಗೆ ಒಂದು ಪ್ರೌಢ, ಎರಡು ಪಿಯು ಕಾಲೇಜು ಒಂದು ವಾರದಲ್ಲಿ ಮಂಜೂರಾಗಲಿವೆ. ರಾಜ್ಯದಲ್ಲಿ ಎಲ್‌ಕೆಜಿಯಿಂದ ಪಿಯು ವರೆಗೆ ಕೆಪಿಎಸ್ ಮಾದರಿ ಅನುಸರಿಸಲಾಗುತ್ತದೆ. ರಾಜ್ಯದಲ್ಲಿ ೫೦೦ ಕೆಪಿಎಸ್ ಶಾಲೆ ಮಂಜೂರು ಮಾಡಲಾಗುತ್ತಿದೆ. ಅದರಲ್ಲಿ ತಾಲೂಕಿಗೆ ೬ ಶಾಲೆಗಳಿಗೆ ಅನುಮೋದನೆ ದೊರಕಲಿದೆ. ಇಂತಹ ಯೋಜನೆಯನ್ನು ದೇಶದ ಯಾವ ರಾಜ್ಯದಲ್ಲಿಯೂ ಮಾಡಿಲ್ಲ. ಸದ್ಯ ಕ್ಷೇತ್ರದ ಗುನ್ನಾಳ, ಬಿನ್ನಾಳಗೆ ಕೆಪಿಎಸ್ ಶಾಲೆ ಮಂಜೂರಾಗಿವೆ. ರಾಜ್ಯದಲ್ಲಿ ೨೦೦ ಪ್ರೌಢಶಾಲೆಗಳು ಹೊಸದಾಗಿ ಪ್ರಾರಂಭವಾಗಲಿವೆ. ಈಗಾಗಲೇ ೫೦ ಪಿಯು ಕಾಲೇಜು ಕೊಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸುನಾಮಿ ತರ ನಡೆಯುತ್ತವೆ ಎಂದರು.
ಡಿಡಿಪಿಐ ಶ್ರೀಶೈಲ ಬಿರಾದಾರ, ಉಪಪ್ರಾಚಾರ್ಯ ಬಾಬುಸಾಬ್ ಲೈನದಾರ್ ಮಾತನಾಡಿದರು.ಈ ವೇಳೆ ಸಹಾಯಕ ಆಯುಕ್ತ ಕ್ಯಾ. ಮಹೇಶ ಮಾಲಗಿತ್ತಿ, ಗ್ರಾಪಂ ಅಧ್ಯಕ್ಷೆ ಹುಲಿಗೆಮ್ಮ ಬಸವರಾಜ ತಳವಾರ, ಡಿಡಿಪಿಯು ಜಗದೀಶ, ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ತಾಪಂ ಇಒ ಸಂತೋಷ ಪಾಟೀಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಣ ಚಂದ್ರಶೇಖರಯ್ಯ ಭಾನಾಪುರ, ಬಿಇಒ ಸೋಮಶೇಖರಗೌಡ ಪಾಟೀಲ್, ಪ್ರಮುಖರಾದ ಕೆರಿಬಸಪ್ಪ ನಿಡಗುಂದಿ, ಹನುಮಂತಗೌಡ ಚಂಡೂರ, ಮಹೇಶ ಹಳ್ಳಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಮಲ್ಲಿಕಾರ್ಜುನ ಜಕ್ಕಲಿ, ಅಶೋಕ ತೋಟದ, ಮಂಜುನಾಥ ಸಜ್ಜನ, ಗಣೇಶ ಪೊಪಳೆ, ಹೇಮರಡ್ಡಿ ರಡ್ಡೇರ್, ಸುಧೀರ ಕೊರ್ಲಹಳ್ಳಿ, ಹನುಮೇಶ ಕಡೆಮನಿ, ಹನುಮಂತ ಕಲಭಾವಿ, ಚಂದ್ರಕಾಂತಯ್ಯ ಕಲ್ಯಾಣಮಠ, ಬಸವರಾಜ ಹಿರೇಮನಿ, ವೀರೇಶ ಕೋರಿ, ಹನುಮೇಶ ಚಿಣಗಿ ಸೇರಿದಂತೆ ಮತ್ತಿತರರು ಇದ್ದರು.
ರಾಜ್ಯದ ಲೀಡರ್ ಆಗಿ:ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದ್ದು, ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಒಳ ಮೀಸಲಾತಿ ವಿಚಾರವಾಗಿ ಪ್ರಕ್ರಿಯೆ ತಡೆ ಹಿಡಿಯಲಾಗಿದೆ ಎಂದು ಸರ್ಕಾರದಿಂದ ಮಾಹಿತಿ ಇದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.ಶಾಸಕ ಬಸವರಾಜ ರಾಯರಡ್ಡಿ ಮಾಡಿದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಯಾವ ಶಾಸಕರಿಂದ ಆಗಿಲ್ಲ. ಇದರಿಂದ ಯಲಬುರ್ಗಾ ಕ್ಷೇತ್ರ ಅಭಿವೃದ್ಧಿಯಲ್ಲಿ ಮುಂದಿದೆ. ಶೈಕ್ಷಣಿಕವಾಗಿ ರಾಜ್ಯದ ಗಮನ ಸೆಳೆದಿದೆ ಎಂದು ಹೊಗಳಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಸ್ಥಳೀಯ ಮಕ್ಕಳಿಗೆ ಶೇ.೭೫, ಹೊರಗಿನವರಿಗೆ ಶೇ.೨೫ ಅನುಪಾತ ಜಾರಿಗೊಳಿಸಲಾಗಿದೆ. ಇದನ್ನು ನಾನು ಒಪ್ಪುವುದಿಲ್ಲ. ಇದರಲ್ಲಿ ನಮಗೆ ಸಾಮಾಜಿಕ ನ್ಯಾಯ ಬೇಕು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಮತ್ತೊಮ್ಮೆ ಬರೆಯುತ್ತೇನೆ. ರಾಯರಡ್ಡಿ ಅವರಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇರಬೇಕೆ ಹೊರತು ಕೇವಲ ಒಂದು ಕ್ಷೇತ್ರದ ಅಭಿವೃದ್ಧಿಗೆ ಸೀಮಿತರಾಗಬಾರದು. ರಾಯರಡ್ಡಿಯವರೆ ನೀವು ಕೇವಲ ಯಲಬುರ್ಗಾ ಲೀಡರ್ ಆಗಬೇಡಿ, ರಾಜ್ಯದ ಲೀಡರ್ ಆಗಬೇಕು ಎಂದರು.